ಉದಯವಾಹಿನಿ, ಚಿಕ್ಕಮಗಳೂರು: ಮಳೆಗಾಲದಲ್ಲಿ ಭೂಕುಸಿತ ಸಂಭವಿಸಬಹುದಾದ 163 ಪ್ರದೇಶಗಳನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಗುರುತಿಸಿದೆ. ಇದರಲ್ಲಿ ಗುಡ್ಡದ ತಪ್ಪಲಿನ ಹಳ್ಳಿಗರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವಂತಹ ಪ್ರದೇಶಗಳು ಇವೆ. ಭೂಕುಸಿತದಂತಹ ಅನಾಹುತಗಳನ್ನ ತಡೆಯಲು ರಾಜ್ಯ ಸರ್ಕಾರ 66.47 ಕೋಟಿ ರೂ. ಹಣವನ್ನ ಬಿಡುಗಡೆ ಮಾಡಿದೆ. 2019 ರಿಂದ ಪ್ರತಿವರ್ಷ ನಿರಂತರವಾಗಿ ಧಾರಾಕಾರ ಮಳೆಯಾಗಿದೆ. ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಪ್ರಕರಣಗಳ ಆಧಾರದ ಮೇಲೆ ಜಿಲ್ಲಾಡಳಿತ 163 ದುರ್ಬಲ ಪ್ರದೇಶಗಳೆಂದು ಗುರುತು ಮಾಡಿದೆ. ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯು ನೀಡಿರುವ ಸಲಹೆ ಮೇರೆಗೆ ಜನವಸತಿ ಮತ್ತು ರಸ್ತೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ 25 ಸ್ಥಳಗಳನ್ನ ಜಿಲ್ಲಾಡಳಿತ ಪ್ರತ್ಯೇಕವಾಗಿ ಪಟ್ಟಿ ಮಾಡಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಸರ್ವೇ ಮಾಡಿದ್ದ ಜಿ.ಎಸ್.ಐ. ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟಿ ಹಾಗೂ ಬಾಬಾಬುಡನ್‌ಗಿರಿ ಭಾಗದಲ್ಲಿ ಹೆಚ್ಚು ಅಪಾಯದ ಸ್ಥಳಗಳಿವೆ ಎಂದು ವರದಿ ನೀಡಿತ್ತು.
ಮಣ್ಣಿನ ಸವಕಳಿ, ಇಳಿಜಾರಿನ ಪ್ರದೇಶ, ಮಳೆಯ ಪ್ರಮಾಣ, ಗಾಳಿಯ ವೇಗ, ಅಂತರ್ಜಲ, ನೀರಿನ ಹರಿವು ಕುರಿತು ಅಧ್ಯಯನ ನಡೆಸಲಾಗಿತ್ತು. ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ ರಸ್ತೆ ಮತ್ತು ಚಾರ್ಮಾಡಿ ಘಾಟ್ ವಿಭಾಗದಲ್ಲಿ ಹೆಚ್ಚು ಅಪಾಯದ ಸ್ಥಳಗಳಿವೆ. ಕಡಿದಾದ ಇಳಿಜಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಕಾಡಿನಲ್ಲಿ ಮಾನವ ಚಟುವಟಿಕೆ ಹೆಚ್ಚಾಗಿರುವುದರಿಂದ ಈ ರೀತಿಯ ಅಪಾಯಗಳು ಹೆಚ್ಚಾಗುತ್ತಿವೆ. ಅತಿಯಾದ ಮಳೆ, ಅಂತರ್ಜಲದ ಒತ್ತಡ ನಿರ್ವಹಣೆ ಮಾಡದಿರುವುದು, ಗುಡ್ಡಗಳನ್ನ ಕಡಿದು ಅಗೆದು ರಸ್ತೆ ಮತ್ತು ಮನೆಗಳನ್ನು ನಿರ್ಮಾಣ ಮಾಡಿರುವುದು ಗುಡ್ಡ ಕುಸಿತಕ್ಕೆ ಕಾರಣ ಎಂದು ಜಿಎಸ್‌ಐ ವರದಿ ನೀಡಿತ್ತು.
