ಉದಯವಾಹಿನಿ, ಮಂಗಳೂರು: ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂ.1 ಇತ್ತು. ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ ಎಂದು ಪುತ್ತೂರು ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಪುತ್ತೂರು ಶಾಸಕ ಅಶೋಕ್ ರೈ ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ʻಅಶೋಕ ಜನಮನ -2025ʼ ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಜನರಿಗೆ ಸೌಹಾರ್ದತೆಯ ಪಾಠ ಮಾಡಿದರು.
ಕೆಲವರು 5 ಗ್ಯಾರಂಟಿ ಯೋಜನೆ ಟೀಕೆ ಮಾಡ್ತಾರೆ. ಸರ್ಕಾರದ ಬಳಿ ದುಡ್ಡಿಲ್ಲ ಅಂತ, ದುಡ್ಡಿಲ್ಲದಿದ್ದರೆ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಕೊಡೋಕೆ ಆಗ್ತಿತ್ತಾ? ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂಬರ್ ವನ್ ಇತ್ತು. ಆದರೆ ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ. ಏಕೆಂದ್ರೆ ಎತ್ತಿಕಟ್ಟೋರ ಮಕ್ಕಳು ಯಾರೂ ಈ ಜಗಳದಲ್ಲಿ ಇರಲ್ಲ. ಮೇಲ್ಜಾತಿ, ಶ್ರೀಮಂತರ ಮಕ್ಕಳು ಯಾರೂ ಸಾಯಲ್ಲ. ನಾನು ಯಾರ ಮಾತನ್ನೂ ಕೇಳಿಲ್ಲ, ಕಮಿಷನರ್, ಎಸ್ಪಿ ದಕ್ಷರನ್ನ ನೇಮಕ ಮಾಡಿದೆ. ಈಗ ಸುಧಾರಣೆ ಆಗಿಲ್ವಾ? ದಕ್ಷ ಅಧಿಕಾರಿಗಳು ಇದ್ರೆ ಬದಲಾವಣೆ ಸಾಧ್ಯ. ಯಾವತ್ತಿಗೂ ನಾವು ಅಮಾಯಕರ ಮಕ್ಕಳನ್ನ ಸಾಯಿಸೋ ಕೆಲಸ ಮಾಡಬಾರದು. ಬೇರೆ ಧರ್ಮದವರನ್ನ ದ್ವೇಷ ಮಾಡೋ ಕೆಲಸ ಮಾಡಬಾರದು, ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಮನುಷ್ಯರಾಗೋಕೆ ಪ್ರಯತ್ನ ಮಾಡಬೇಕು. ಕೋಮು ಸೌಹಾರ್ದತೆ ಇದ್ದರೆ ರಾಜ್ಯ, ಜಿಲ್ಲೆ ಅಭಿವೃದ್ಧಿಯಾಗುತ್ತೆ. ಅದಕ್ಕಾಗಿ ನಾವು ಕೋಮು ಸೌಹಾರ್ದ ಕಾಪಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೌಹಾರ್ದಕ್ಕೆ ವಿಶೇಷ ಗಮನ ಕೊಡಬೇಕು. ಸುಳ್ಳು ಹೇಳಿದ್ರೆ ಕಾನೂನು ತಂದು ಕೇಸ್ ಹಾಕ್ತೀವಿ. ಪ್ರಿಯಾಂಕ್ ಖರ್ಗೆ ಮತ್ತು ಹೆಚ್.ಕೆ ಪಾಟೀಲ್ ಆ ಕೆಲಸದಲ್ಲಿ ತೊಡಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.
