ಉದಯವಾಹಿನಿ, ಪಣಜಿ: ಪೋರ್ಚುಗಲ್‌ನ ಫುಟ್ಬಾಲ್‌ ದಂತಕಥೆಯಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆಟ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ತೀವ್ರ ನಿರಾಶೆಯ ಸುದ್ದಿಯೊಂದು ಹೊರಬಿದ್ದಿದೆ. ಭಾರತೀಯ ಕ್ಲಬ್‌ನ ಹಲವಾರು ವಿನಂತಿಗಳ ಹೊರತಾಗಿಯೂ, ಕ್ರಿಸ್ಟಿಯಾನೊ ರೊನಾಲ್ಡೊ ಎಫ್‌ಸಿ ಗೋವಾ ವಿರುದ್ಧದ ಅಲ್-ನಾಸರ್‌ನ ಎಎಫ್‌ಸಿ ಚಾಂಪಿಯನ್ಸ್ ಲೀಗ್ 2 ಪಂದ್ಯಕ್ಕಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.ಲಿಯೋನೆಲ್ ಮೆಸ್ಸಿ ಮತ್ತು ಅವರ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವು ಆಸ್ಟ್ರೇಲಿಯಾ ವಿರುದ್ಧದ ಅಂತರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿರುವಾಗಲೇ ಈ ನಿರ್ಧಾರ ಬಂದಿದೆ.ಈ ಹಿಂದೆ ವರದಿಯಾದ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ರೊನಾಲ್ಡೊ ಭಾರತಕ್ಕೆ ಭೇಟಿ ನೀಡಲಿದ್ದು, ಎಫ್‌ಸಿ ಗೋವಾ(FC Goa) ವಿರುದ್ಧದ ಎಎಫ್‌ಸಿ ಚಾಂಪಿಯನ್ಸ್ ಲೀಗ್ 2 ಪಂದ್ಯವನ್ನು ಆಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದೀಗ ರೊನಾಲ್ಡೊ, ಎಫ್‌ಸಿ ಗೋವಾ ಪಂದ್ಯಕ್ಕಾಗಿ ಭಾರತ ಪ್ರವಾಸವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೌದಿ ಮಾಧ್ಯಮ ಅಲ್ ರಿಯಾಧಿಯಾ ಪ್ರಕಾರ, ರೊನಾಲ್ಡೊ ಅಕ್ಟೋಬರ್ 22 ರಂದು ಫಟೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ರೂಪ್ ಡಿ ಪಂದ್ಯಕ್ಕಾಗಿ ಅಲ್-ನಾಸರ್‌ ಪ್ರಯಾಣ ತಂಡದಿಂದ ಹೊರಗುಳಿದಿದ್ದಾರೆ. ಎಫ್‌ಸಿ ಗೋವಾದ ಆಡಳಿತ ಮಂಡಳಿಯು ರೊನಾಲ್ಡೊ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಅಲ್-ನಾಸರ್‌ ಕ್ಲಬ್‌ಗೆ ಅವರನ್ನು ಒತ್ತಾಯಿಸಿತ್ತು, ಅವರ ಉಪಸ್ಥಿತಿಯು ಪಂದ್ಯದ ಬೇಡಿಕೆ ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಗಮನವನ್ನು ಸೆಳೆಯುತ್ತದೆ ಎಂದು ಆಶಿಸಿತ್ತು.

Leave a Reply

Your email address will not be published. Required fields are marked *

error: Content is protected !!