ಉದಯವಾಹಿನಿ, ದೀಪಾವಳಿಯಲ್ಲಿ ಜನರು ದೀಪಗಳನ್ನು ಹಚ್ಚುವುದಕ್ಕಿಂತಲೂ ಪಟಾಕಿ ಸಿಡಿಸಿ ಸಂಭ್ರಮ ಪಡುತ್ತಾರೆ. ಈ ಮೂರು ದಿನಗಳ ಸಂಭ್ರಮದಲ್ಲಿ ಪಟಾಕಿಗಳು ಇಲ್ಲದಿದ್ದರೆ ಅದು ಹಬ್ಬವೇ ಅಲ್ಲ ಎಂಬ ಮನಸ್ಥಿತಿ ಹಲವರದ್ದು. ಅದು ತಪ್ಪಲ್ಲ. ಆದರೆ ಎಲ್ಲವೂ ಇತಿಮಿತಿಯಲ್ಲಿದ್ದರೆ ಬಹಳ ಒಳಿತು. ಅತಿಯಾದರೆ ಅಥವಾ ಅಗತ್ಯವಿದ್ದಾಗ ಮಾಡುವ ನಿರ್ಲಕ್ಷ್ಯ ಅಥವಾ ನಿಷ್ಕಾಳಜಿ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಹಾಗಾಗಿ ಹಬ್ಬದ ಸಂಭ್ರಮದಲ್ಲಿ ಆರೋಗ್ಯದ ಬಗ್ಗೆ ಅದರಲ್ಲಿಯೂ ಕಣ್ಣಿನ ವಿಷಯದಲ್ಲಿ ಹೆಚ್ಚಿನ ಕಾಳಜಿ ಮಾಡುವುದು ಬಹಳ ಅವಶ್ಯಕವಾಗಿದೆ. ಇಲ್ಲವಾದಲ್ಲಿ ಖುಷಿಯ ಕ್ಷಣ ಸೆಕೆಂಡುಗಳಲ್ಲಿ ಮಾಯವಾಗುತ್ತದೆ. ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವಾಗ ನಿಮ್ಮ ಕಣ್ಣಿನ ಆರೈಕೆ (Eye Care) ವಹಿಸಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು ಅವುಗಳನ್ನು ಪಾಲನೆ ಮಾಡುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ದೃಷ್ಠಿ ನಷ್ಟವಾಗುವುದನ್ನು ತಡೆಯಬಹುದು. ಹಾಗಾದರೆ ಏನದು ಸಲಹೆ? ಪಟಾಕಿ ಸಿಡಿಸುವಾಗ ಯಾವ ರೀತಿಯ ಕಾಳಜಿ ವಹಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪಟಾಕಿ ಇಲ್ಲದೆ ದೀಪಾವಳಿ ಹಬ್ಬವನ್ನು ಊಹಿಸಲೂ ಸಾಧ್ಯವಿಲ್ಲ ಎನ್ನುವವರು ಪಟಾಕಿ ತರುವುದಕ್ಕಿಂತಲೂ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲನೆ ಮಾಡಲು ಮನೆಯವರಿಗೆ ಅದರಲ್ಲಿಯೂ ಮಕ್ಕಳಿಗೆ ತಿಳಿ ಹೇಳಬೇಕು.
ಪಟಾಕಿಗಳು ಸುಟ್ಟಗಾಯಗಳು, ಕಿಡಿಗಳು, ಕಾಂಜಂಕ್ಟಿವಿಟಿಸ್, ಆಘಾತಕಾರಿ ಆಪ್ಟಿಕ್ ನರರೋಗ ಮತ್ತು ಕಣ್ಣುಗಳಿಗೆ ರಾಸಾಯನಿಕ ಗಾಯವನ್ನು ಉಂಟುಮಾಡಬಹುದು. ಹಾಗಾಗಿ ಪಟಾಕಿ ಹಚ್ಚುವ ಮುನ್ನ ಎಚ್ಚರಿಕೆ ವಹಿಸಿ.
ಪಟಾಕಿ ಹಚ್ಚುವಾಗ ರಕ್ಷಣಾತ್ಮಕ ಕನ್ನಡಕಗಳನ್ನು ಬಳಕೆ ಮಾಡಬೇಕು. ಯಾವಾಗಲೂ ಪಟಾಕಿಯಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಅದರಲ್ಲಿಯೂ ಮಕ್ಕಳು ಪಟಾಕಿ ಸಿಡಿಸುತ್ತಾರೆ ಎನ್ನುವಾಗ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು.
ಶಬ್ದ ಮಾಡುವ ಪಟಾಕಿಗಳಿಗಿಂತ ಸುರಕ್ಷಿತ, ಕಡಿಮೆ ತೀವ್ರತೆಯ ಪಟಾಕಿಗಳನ್ನು ಬಳಕೆ ಮಾಡುವುದು ಬಹಳ ಉತ್ತಮ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಪಟಾಕಿಗಳನ್ನು ತಯಾರಿಸುವುದು ಹೆಚ್ಚಾಗಿದೆ. ಆದರೆ ಇದು ಕೂಡ ಒಳ್ಳೆಯದಲ್ಲ. ಏಕೆಂದರೆ ಅವುಗಳಲ್ಲಿ ಗುಣಮಟ್ಟದ ಕೊರತೆ ಇದ್ದು ಅನಿರೀಕ್ಷಿತ ಸ್ಫೋಟಗಳಿಗೆ ಕಾರಣವಾಗಬಹುದು, ಕಣ್ಣಿನ ಗಾಯಗಳ ಅಪಾಯವನ್ನು ಹೆಚ್ಚಿಸಬಹುದು.
ಕಣ್ಣಿನ ಸಮಸ್ಯೆ ಮತ್ತು ಅಲರ್ಜಿ ಇರುವವರು ಪಟಾಕಿಯ ಹೊಗೆಗಳಿಂದ ಆದಷ್ಟು ದೂರವಿರಿ. ಪರಿಸರ ಸ್ನೇಹಿ ಪಟಾಕಿಗಳು ಮತ್ತು ಬೆಳಕಿನ ಪರ್ಯಾಯಗಳನ್ನು ಆರಿಸಿಕೊಳ್ಳಿ, ಅದು ಪರಿಸರ ಮತ್ತು ನಿಮ್ಮ ಆರೋಗ್ಯಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!