
ಉದಯವಾಹಿನಿ , ಬೆಂಗಳೂರು: ಸರ್ಕಾರ ಎರಡೂವರೆ ವರ್ಷದ ಹೊಸ್ತಿಲಿನಲ್ಲಿರುವಾಗ ಸಂಪುಟ ಪುನಾರಚನೆ ವಿಚಾರ ಪುಷ್ಟಿ ಪಡೆದುಕೊಳ್ಳುತ್ತಿದೆ. ಬಿಹಾರ ಫಲಿತಾಂಶ ಬಳಿಕ ಪುನಾರಚನೆ ಖಚಿತ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಆದರೆ ಪುನಾರಚನೆ ಕಸರತ್ತಿಗೆ ಪವರ್ ಶೇರ್ ಪಾಲಿಟಿಕ್ಸ್ ಮೂಲಕ ತಡೆ ಹಾಕುವ ಪ್ರಯತ್ನಗಳೂ ಸದ್ದಿಲ್ಲದೇ ನಡೆಯುತ್ತಿದೆ.
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಂಪುಟ ಪುನಾರಚನೆ ಜಪ ಶುರುವಾಗಿದೆ. ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿದೆ ಎನ್ನಲಾದ ಕುರ್ಚಿ ಕಚ್ಚಾಟಕ್ಕೆ ಸಿಎಂ ಸಿದ್ದರಾಮಯ್ಯ ಪುನಾರಚನೆ ದಾಳ ಮೂಲಕ ಸೆಡ್ಡು ಹೊಡೆದಿದ್ದಾರೆ. ಶನಿವಾರ ಮಾತಾಡಿದ ಸಿಎಂ ಸಿದ್ದರಾಮಯ್ಯ, ಬಿಹಾರ ಫಲಿತಾಂಶ ಬಳಿಕ ಸಂಪುಟ ಪುನಾರಚನೆ ಖಚಿತ ಎಂಬ ಸಂದೇಶ ನೀಡಿದ್ದಾರೆ. ಮೂರ್ನಾಲ್ಕು ತಿಂಗಳ ಮೊದಲೇ ಹೈಕಮಾಂಡ್ ಪುನಾರಚನೆಗೆ ಸೂಚಿಸಿತ್ತು. ಎರಡೂವರೆ ವರ್ಷ ಆಗಲಿ ಎಂದು ನಾನೇ ಹೇಳಿದ್ದೆ ಎಂದು ಸಿಎಂ ಹೇಳಿದ್ದು, ಈ ವರ್ಷಾಂತ್ಯಕ್ಕೆ ಪುನಾರಚನೆ ಪಕ್ಕಾ ಎಂಬ ಸುಳಿವು ಕೊಟ್ಟಿದ್ದಾರೆ.
ಇನ್ನು ಈಗಾಗಲೇ ಕೆಲ ಹಿರಿಯರಿಂದ ತ್ಯಾಗದ ಮಾತು ಕೇಳಿಬರುತ್ತಿದೆ. ಬದಲಾಗುವ ಪರಿಸ್ಥಿತಿ ಎದುರಿಸಲು ಮಾನಸಿಕವಾಗಿ ಕೆಲ ಹಿರಿಯರು ತಯಾರಾಗುತ್ತಿದ್ದಾರೆ. ಪುನಾರಚನೆಯಾದರೆ, 12ಕ್ಕೂ ಹೆಚ್ಚು ಸೀನಿಯರ್‌ಗಳಿಗೆ ಗೇಟ್‌ಪಾಸ್ ಕೊಡುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಹಿರಿಯ ಸಚಿವ ಕೃಷ್ಣಬೈರೇಗೌಡ ಕೂಡಾ ಪುನಾರಚನೆ ಖಚಿತ ಅಂದಿದ್ದಾರೆ. ಸರ್ಕಾರ ರಚನೆ ವೇಳೆಯೇ ಎರಡೂವರೆ ವರ್ಷದ ಬಳಿಕ ಹೊರಗಿರುವ ಶಾಸಕರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಹೈಕಮಾಂಡ್ ತಿಳಿಸಿತ್ತು ಅಂದಿದ್ದಾರೆ. ಹೈಕಮಾಂಡ್ ಹೇಳಿದರೆ ತ್ಯಾಗಕ್ಕೂ ಸಿದ್ಧ ಅಂದಿದ್ದಾರೆ.
