ಉದಯವಾಹಿನಿ, ನವದೆಹಲಿ: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡದ ಕೇರಳ ಪ್ರವಾಸ ಮತ್ತೆ ಮುಂದೂಡಿಕೆಯಾಗಿದೆ. ಮೂಲ ವೇಳಾಪಟ್ಟಿಯ ಪ್ರಕಾರ, ನವೆಂಬರ್ 17 ರಂದು ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೌಹಾರ್ದ ಪಂದ್ಯದಲ್ಲಿ ಆಡಬೇಕಿತ್ತು.
ಆದರೆ ಈ ಪಂದ್ಯಕ್ಕೆ ಜಾಗತಿಕ ಫುಟ್ಬಾಲ್ ಮಂಡಳಿ ಫಿಫಾದಿಂದ ಅನುಮತಿ ಸಿಗದ ಕಾರಣ ಪಂದ್ಯ ಮುಂದೂಡಿಕೆಯಾಗಿದೆ ಎಂದು ಪಂದ್ಯದ ಪ್ರಯೋಜಕರಾದ ಉದ್ಯಮಿ ಆ್ಯಂಟೋ ಅಗಸ್ಟಿನ್ ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.”ಪಂದ್ಯಕ್ಕೆ ಫಿಫಾದಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಗಿದೆ” ಎಂದು ಆ್ಯಂಟೋ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅರ್ಜೆಂಟೀನಾದ ಫುಟ್‌ಬಾಲ್ ಅಸೋಸಿಯೇಷನ್ (ಎಎಫ್‌ಎ) ಜೊತೆಗಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
“2022ರ ವಿಶ್ವಕಪ್ ವಿಜೇತ ತಂಡವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಲಕ್ಷಾಂತರ ಫುಟ್ಬಾಲ್ ಪ್ರೇಮಿಗಳು ತಮ್ಮ ನೆಚ್ಚಿನ ತಂಡದ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಕೇರಳದಲ್ಲಿ ಮೆಸ್ಸಿ ಆಡುವುದನ್ನು ನೋಡಲು ಜನರಿಗೆ ಅವಕಾಶ ಮಾಡಿಕೊಡಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಈ ಕಾರ್ಯಕ್ರಮ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಲು ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ಸೂಚಿಸಿದೆ” ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಹೇಳಿದ್ದರು.
