ಉದಯವಾಹಿನಿ, ಮಂಡ್ಯ: ಭಾನುವಾರ (ಫೆ.1) ಮಾಘ ಹುಣ್ಣಿಮೆ ಇರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಭ ದೇಗುಲದಲ್ಲಿ ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಸುಮಾರು 1 ಲಕ್ಷ ಭಕ್ತರು ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ನಿರೀಕ್ಷೆಯಿದೆ.
ದೇವಾಲಯದ ಬಳಿ ಮಾಘ ಶುದ್ಧ ಹುಣ್ಣಿಮೆಯ ಪೂರ್ವ ಸಿದ್ಧತೆಗಳ ಕುರಿತು ಮಾತನಾಡಿ, ಮಾಘ ಶುದ್ಧ ಹುಣ್ಣಿಮೆಯಂದು ಇಲ್ಲಿನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಶ್ರೀ ನಿಮಿಷಾಂಬ ದೇವಿಯ ದರ್ಶನ ಪಡೆದರೆ ಇಷ್ಠಾರ್ಥ ಸಿದ್ದಿಸುವ ನಂಬಿಕೆಯಿದ್ದು, ಬರುವ ಭಕ್ತರಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಲಾಗುತ್ತಿದೆ. ಇಂದು ಮಧ್ಯರಾತ್ರಿ 2 ಗಂಟೆಯಿಂದಲೇ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ವಿಶೇಷ ಪೂಜೆಗಳೊಂದಿಗೆ ಹೋಮ-ಹವನ ಹಮ್ಮಿಕೊಳ್ಳಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಫೆ.1 ರ ಮದ್ಯ ರಾತ್ರಿ 1 ಗಂಟೆಯಿಂದಲೇ ಇಲ್ಲಿನ ಕಾವೇರಿ ನದಿಯಲ್ಲಿ ಭಕ್ತರಿಗೆ ಮಾಘಶುದ್ಧ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಫೆ.2ರ ರಾತ್ರಿ 10 ಗಂಟೆಯವರೆವಿಗೂ ಮಾಘ ಶುದ್ಧ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
