ಉದಯವಾಹಿನಿ, ಚಿತ್ರದುರ್ಗ: ಗಣಿಯೊಂದರಲ್ಲಿ ಲಾರಿ ಡಿಕ್ಕಿ ಹೊಡೆದು ಸೂಪರ್‌ವೈಸರ್ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್ (49) ಮೃತ ಸೂಪರ್‌ವೈಸರ್. ಶುಕ್ರವಾರ ಮಧ್ಯಾಹ್ನ ಅಪಘಾತ ನಡೆದಿದ್ದು, ಚಂದ್ರಶೇಖರ್ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಈ ವಿಚಾರವನ್ನು ಕುಟುಂಬಸ್ಥರ ಗಮನಕ್ಕೆ ತರದೇ ಕಂಪನಿ ನಿರ್ಲಕ್ಷ್ಯ ವಹಿಸಿದೆ. ಅಲ್ಲದೇ ಗಣಿಯಲ್ಲಿ ಸಿಬ್ಬಂದಿಗೆ ಸುರಕ್ಷತೆ ಇಲ್ಲ. ಕೇವಲ ಅವರ ಆದಾಯಕ್ಕೆ ಆದ್ಯತೆ ನೀಡಿದ್ದು, ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲ. ಹೀಗಾಗಿ ಈ ರೀತಿ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಹಾಗೆಯೇ ಅಪಘಾತಕ್ಕೀಡಾದ ಬಳಿಕ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ಶಿಫ್ಟ್ ಮಾಡಿದ್ದು, ಪ್ರಕರಣವನ್ನು ಮರೆಮಾಚುವ ಕಾರ್ಯ ನಡೆದಿರುವ ಶಂಕೆ ಇದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಕ್ರೋಶ ಮೃತನ ಸಂಬಂಧಿಕರು ಹಾಗೂ ಗಣಿ ಉದ್ಯೋಗಿಗಳಿಂದ ಕೇಳಿಬಂದಿದೆ. ಸದ್ಯ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
