ಉದಯವಾಹಿನಿ, ತುಮಕೂರು: ಮಿರರ್ ಇಲ್ಲದೆ ಬಂದ ಬೈಕ್ ಸವಾರ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ದಂಡ ಕಟ್ಟುವ ವಿಚಾರವಾಗಿ ವಾಗ್ವಾದ ನಡೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ರಿಂಗ್ ರಸ್ತೆಯಲ್ಲಿ ಹರ್ಷ ಎಂಬ ಯುವಕ ಬೆಂಗಳೂರಿಂದ ಅರಸಿಕೆರೆಗೆ ಬೈಕಲ್ಲಿ ಹೋಗುತಿದ್ದ. ಯುವಕನ ಬೈಕ್‌ಗೆ ಎರಡೂ ಮಿರರ್ ಇರಲಿಲ್ಲ. ಹೀಗಾಗಿ ರಿಂಗ್ ರಸ್ತೆಯಲ್ಲಿ ನಗರ ಪೂರ್ವ ಸಂಚಾರಿ ಮಹಿಳಾ ಪಿಎಸ್‌ಐ ಸ್ಪಾಟ್ ಫೈನ್ ಹಾಕಿದ್ದಾರೆ. ಆದರೆ ಯುವಕ ತನ್ನ ಬಳಿ ಹಣ ಇಲ್ಲ, ರಶೀದಿ ಕೊಡಿ ಕೋರ್ಟ್‌ನಲ್ಲಿ ಕಟ್ಟುತ್ತೇನೆ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ. ಒಪ್ಪದ ಪೊಲೀಸರು ಸ್ಥಳದಲ್ಲೇ ದಂಡ ಕಟ್ಟಬೇಕು ಎಂದು ತಾಕೀತು ಮಾಡಿದ್ದಾರೆ. ಇದರಿಂದ ಪೊಲೀಸರು ಮತ್ತು ಸವಾರನ ನಡುವೆ ವಾಗ್ವಾದ ನಡೆದಿದೆ. ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಅಂತ ಯುವಕ ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾನೆ. ಇದರಿಂದಾಗಿ ಸುಮಾರು ಅರ್ಧ ಕಿ.ಮೀ ದೂರದಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾರ್ವಜನಿಕರಿಗೆ ತೊಂದರೆ ಆದ ಹಿನ್ನೆಲೆ ಜಯನಗರ ಪೊಲೀಸರು ಹರ್ಷನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆ ಎಫ್‌ಐಆರ್ ದಾಖಲಿಸಿದ್ದಾರೆ.
