ಉದಯವಾಹಿನಿ, ಮಂಡ್ಯ: ಸಚಿವ ಚಲುವರಾಯಸ್ವಾಮಿ ಯಾರು ಮುಖ್ಯಮಂತ್ರಿ ಮಗನಾ? ಕುಮಾರಣ್ಣನ ಬಗ್ಗೆ ಮಾತನಾಡೋಕೆ ಕಾಂಗ್ರೆಸ್ ಶಾಸಕರಿಗೆ ಯೋಗ್ಯತೆ ಬೇಕು ಎಂದು ಜೆಡಿಎಸ್‌ನ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಒಂದು ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಮಂಡ್ಯ ಜಿಲ್ಲೆಯಲ್ಲಿ ಈ ಬದಲಾವಣೆ ಅಚ್ಚರಿ ಮೂಡಿಸಿದೆ. ಜನರ ಆದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಬಜೆಟ್‌ನಲ್ಲಿ ಮಂಡ್ಯಗೆ ಉತ್ತಮ ಕೊಡುಗೆ ಸಿಗುತ್ತೆ ಅಂದುಕೊಂಡಿದ್ದೆ. ನಿರಾಸದಾಯಕ ಬಜೆಟ್ ಕೊಟ್ಟು ಮಂಡ್ಯ ಜಿಲ್ಲೆ ಜನಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ ಎಂದರು. ಮೂಲೆಯಲ್ಲಿ ಕೂತ ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ನಾನು ಅಂತಾರೆ ಒಬ್ಬ ನಾಯಕ. ಅವರು ಮಂಡ್ಯಗೆ ಏನಾದ್ರು ಕೊಡುಗೆ ತರುತ್ತಾರೆ ಅಂದುಕೊಂಡಿದ್ದೆ.
ಮಂಡ್ಯ ಕಾಂಗ್ರೆಸ್ ಶಾಸಕರು ಕೈಗೊಂಬೆಯಾಗಿ ಕುಳಿತಿದ್ದಾರೆ. ಇವರಿಗೆ ತಮ್ಮ ನಾಯಕರ ಹತ್ತಿರ ಮಾತನಾಡೋ ತಾಕತ್ತು ಯೋಗ್ಯತೆ ಇಲ್ಲ. ಇಂಥವರು ಇನ್ನೊಬ್ಬರ ಬಗ್ಗೆ ಮಾತಾಡುತ್ತಾರೆ. ವಿಧಾನಸೌಧದಲ್ಲಿ ಇವರು ಡ್ರಾಮಾ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದರು. ಕುಮಾರಣ್ಣನ ಕೊಟ್ಟ ಯೋಜನೆ ತಡೆದಿದ್ದಾರೆ. ಮುಖ್ಯಮಂತ್ರಿ ಮಾಡುವ ತಾಕತ್ತು ಇರುವವರು ಮಂಡ್ಯದಲ್ಲಿ ಇದ್ದ ಟ್ರಾಮಾ ಸೆಂಟರ್ ಅನ್ನು ಮೈಸೂರಿಗೆ ಕೊಟ್ಟಿದ್ದಾರೆ. ಐದು ಜನ ಕಾಂಗ್ರೆಸ್ ಶಾಸಕರಿಗೆ ನಾಚಿಕೆಯಾಗಬೇಕು. ಯಾರು ಈ ಚಲುವರಾಯಸ್ವಾಮಿ? ಈತ ಏನು ಮುಖ್ಯಮಂತ್ರಿ ಮಗನಾ? ಈತ ಏನು ರಾಜ್ಯದ ದೊಡ್ಡ ನಾಯಕನಾ? ಈತ ಕ್ಲಾಸ್ 3 ಕಂಟ್ರಾಕ್ಟರ್. ಈತನನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮಾಡಿದ್ದು ಜೆಡಿಎಸ್, ಎಂಎಲ್‌ಎ ಮಾಡಿದ್ದು ಜೆಡಿಎಸ್, ಮಂತ್ರಿ ಮಾಡಿದ್ದು ಜೆಡಿಎಸ್ ಎಂದು ವಾಗ್ದಾಳಿ ನಡೆಸಿದರು.
