ಉದಯವಾಹಿನಿ, ಕೋಲ್ಕತ್ತಾ: ಅಜ್ಜಿಯ ಪಕ್ಕದಲ್ಲೇ ಮಲಗಿದ್ದ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಹೂಗ್ಲಿಯಲ್ಲಿ ಶುಕ್ರವಾರ ತಡರಾತ್ರಿ ನಾಲ್ಕು ವರ್ಷದ ಬಾಲಕಿ ತನ್ನ ಅಜ್ಜಿಯ ಪಕ್ಕದಲ್ಲಿ ಮಲಗಿದ್ದಳು. ಆಕೆಯನ್ನು ಯಾರೋ ಎತ್ತಿಕೊಂಡು ಹೋಗಿದ್ದು ನಿದ್ದೆಯಲ್ಲಿದ್ದ ಅಜ್ಜಿಗೆ ತಿಳಿಯಲಿಲ್ಲ. ಬೆಳಗ್ಗೆ ಮಗುವನ್ನು ಹುಡುಕಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯು ಮೊಮ್ಮಗಳೊಂದಿಗೆ ತಾರಕೇಶ್ವರದ ರೈಲ್ವೆ ಶೆಡ್‌ನಲ್ಲಿ ಸೊಳ್ಳೆ ಪರದೆಯ ಕೆಳಗೆ ಹಾಸಿಗೆ ಹಾಸಿ ಮಲಗಿದ್ದರು. ಈ ವೇಳೆ ದುರ್ಘಟನೆ ನಡೆದಿದೆ ಎಂದು ಹೂಗ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯು ಶುಕ್ರವಾರ ತಡರಾತ್ರಿ ಮಗುವಿನ ಬಳಿ ಸೊಳ್ಳೆ ಪರದೆಯನ್ನು ಕತ್ತರಿಸಿ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ಮರುದಿನ ಮಧ್ಯಾಹ್ನ ತಾರಕೇಶ್ವರ ರೈಲ್ವೆ ಹೈ ಡ್ರೈನ್ ಬಳಿ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಮಗುವಿನ ಅಜ್ಜಿ, ಮಗು ನನ್ನ ಜೊತೆ ಮಲಗಿತ್ತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯಾರೋ ಅವಳನ್ನು ಎತ್ತಿಕೊಂಡು ಹೋದರು. ಯಾರು ಎಂಬುದು ನನಗೆ ತಿಳಿಯಲಿಲ್ಲ. ಸೊಳ್ಳೆ ಪರದೆಯನ್ನು ಕತ್ತರಿಸಿ ಕರೆದುಕೊಂಡು ಹೋಗಿದ್ದಾರೆ. ಮಗು ಬೆತ್ತಲೆಯಾಗಿ ಸಿಕ್ಕಿದ್ದಾಳೆ. ನಮ್ಮ ಮನೆಗಳನ್ನು ಕೆಡವಲಾಗಿದೆ. ಹೀಗಾಗಿ ನಾವು ಬೀದಿಗಳಲ್ಲಿ ವಾಸಿಸುತ್ತಿದ್ದೇವೆ. ನಾವು ಎಲ್ಲಿಗೆ ಹೋಗಬೇಕು, ನಮಗೆ ಮನೆಯೇ ಇಲ್ಲ ಎಂದು ಅವರು ಕಣ್ಣೀರು ಸುರಿಸಿದ್ದಾರೆ.
