ಉದಯವಾಹಿನಿ, ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಕ್ಷೇತ್ರದಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಬೆಂಗಳೂರು- ಎರ್ನಾಕುಲಂ ಮಾರ್ಗದ ವಂದೇ ಭಾರತ್ ರೈಲು ಕೂಡ ಸೇರಿದೆ. ಇಂದು ಉದ್ಘಾಟನೆಗೊಂಡ ಈ 4 ರೈಲುಗಳು ಪ್ರಮುಖ ನಿಲ್ದಾಣಗಳ ನಡುವಿನ ಪ್ರಯಾಣದ ಸಮಯವನ್ನು ಬಹಳ ಕಡಿಮೆ ಮಾಡುತ್ತದೆ. ಬೆಂಗಳೂರು-ಎರ್ನಾಕುಲಂ ರೈಲು ಮಾರ್ಗ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯವನ್ನು 2 ಗಂಟೆ ಕಡಿಮೆ ಮಾಡುತ್ತದೆ.
ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇರಳ, ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುತ್ತದೆ. ಈ ರೈಲು ಮೊದಲ ಅಂತರ್ ರಾಜ್ಯ ಅರೆ-ಹೈ-ಸ್ಪೀಡ್ ಪ್ರೀಮಿಯಂ ರೈಲು ಸೇವೆಯಾಗಿದೆ. ಬೆಂಗಳೂರು-ಎರ್ನಾಕುಲಂ ರೈಲಿನ ಪ್ರಮುಖ ನಿಲ್ದಾಣಗಳು ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ, ಕೃಷ್ಣರಾಜಪುರಂ ಮತ್ತು ಬೆಂಗಳೂರು ರೈಲ್ವೆ ನಿಲ್ದಾಣ.
ಈ ರೈಲು ಕೇರಳದಿಂದ ಚಲಿಸುವ ಮೂರನೇ ವಂದೇ ಭಾರತ್ ರೈಲು. ಇದು ಪ್ರಯಾಣದ ಸಮಯವನ್ನು 2 ಗಂಟೆ 20 ನಿಮಿಷಗಳ ಕಾಲ ಕಡಿತಗೊಳಿಸಲಿದೆ. ಇಂಟರ್‌ಸಿಟಿ ವಂದೇ ಭಾರತ್ ಎಕ್ಸ್‌ಪ್ರೆಸ್ 8 ಗಂಟೆ 40 ನಿಮಿಷಗಳಲ್ಲಿ 583 ಕಿ.ಮೀ ದೂರವನ್ನು ಕ್ರಮಿಸಲಿದೆ.
ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಬುಧವಾರ ಹೊರತುಪಡಿಸಿ ವಾರದ ದಿನಗಳಲ್ಲಿ ಚಲಿಸಲಿದೆ. ನವೆಂಬರ್ 9ರಿಂದ ಸೇವೆಯನ್ನು ಪ್ರಾರಂಭಿಸುವ ಈ ರೈಲು ಬೆಂಗಳೂರಿನಿಂದ ಬೆಳಿಗ್ಗೆ 5.10ಕ್ಕೆ ಹೊರಟು ಮಧ್ಯಾಹ್ನ 1.50ಕ್ಕೆ ಎರ್ನಾಕುಲಂಗೆ ತಲುಪಲಿದೆ. ವಾಪಾಸ್ ಈ ರೈಲು ಮಧ್ಯಾಹ್ನ 2.20ಕ್ಕೆ ಎರ್ನಾಕುಲಂನಿಂದ ಹೊರಟು ರಾತ್ರಿ 11 ಗಂಟೆಗೆ ಬೆಂಗಳೂರಿಗೆ ಆಗಮಿಸುತ್ತದೆ.
