ಉದಯವಾಹಿನಿ, ಲಕ್ನೋ: ಉತ್ತರ ಪ್ರದೇಶದ ಶಾಲೆ ಕಾಲೇಜುಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯ ಎಂದು ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಗೋರಖ್‌ಪುರದಲ್ಲಿ ನಡೆದ ‘ಏಕತಾ ಯಾತ್ರೆ’ ಮತ್ತು ವಂದೇ ಮಾತರಂ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಉತ್ತರ ಪ್ರದೇಶದ ಪ್ರತಿಯೊಂದು ಶಾಲೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ನಾವು ವಂದೇ ಮಾತರಂ ಗೀತೆ ಹಾಡುವುದನ್ನು ಕಡ್ಡಾಯಗೊಳಿಸುತ್ತೇವೆ. ರಾಷ್ಟ್ರದ ಬಗ್ಗೆ ಗೌರವ ಮತ್ತು ಹೆಮ್ಮೆಯ ಭಾವನೆ ಮೂಡಿಸುವ ಗುರಿಯಿಂದ ಈ ಕ್ರಮ ಜಾರಿ ಮಾಡಲಾಗುವುದು ಎಂದರು.
ವಂದೇ ಮಾತರಂನ್ನು ಸಮಾಜವಾದಿ ಪಕ್ಷದ ಸಂಸದರೊಬ್ಬರು ಟೀಕಿಸಿದ್ದ ವಿಚಾರವಾಗಿ ಇದೇ ವೇಳೆ ಅವರು ಅಸಮಾಧಾನ ಹೊರಹಾಕಿದರು. ಭಾರತದ ಸಮಗ್ರತೆಯ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ತಪ್ಪಿಸಿಕೊಂಡು, ಜಿನ್ನಾ ಅವರನ್ನು ಗೌರವಿಸುವ ಕಾರ್ಯಕ್ರಮಗಳಿಗೆ ನಾಚಿಕೆಯಿಲ್ಲದೆ ಹಾಜರಾಗುವವರು ಅಂಥವರು. ಯಾರಾದರೂ ರಾಷ್ಟ್ರದ ಸಮಗ್ರತೆಯನ್ನು ಪ್ರಶ್ನಿಸಲು ಧೈರ್ಯ ಮಾಡಿದರೆ, ಅಂತವರ ಉದ್ದೇಶ ಬೇರೂರುವ ಮೊದಲು ನಾವು ಅದನ್ನು ಹೂತುಹಾಕಬೇಕು ಎಂದು ಕರೆಕೊಟ್ಟರು.
