ಉದಯವಾಹಿನಿ, ಗುರುಗ್ರಾಮ : ತನ್ನ ಮಾತುಗಳನ್ನು ನಿರ್ಲಕ್ಷ್ಯಿಸಿ ಮೊಬೈಲ್ನಲ್ಲೇ ತಲ್ಲೀನನಾಗಿದ್ದಕ್ಕೆ ಸಿಟ್ಟಾದ 11ನೇ ತರಗತಿಯ ಬಾಲಕ ತನ್ನ ಸಹಪಾಠಿಯ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ದೆಹಲಿಯ ಗುರುಗ್ರಾಮ್ನಲ್ಲಿ ನಡೆದಿದೆ.ಘಟನೆಯ ಸಂದರ್ಭದಲ್ಲಿದ್ದ ಆರೋಪಿ ಮತ್ತು ಆತನೊಂದಿಗಿದ್ದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಗುರುಗ್ರಾಮ್‌ನ ಸೆಕ್ಟರ್ 48ರಲ್ಲಿರುವ ಆರೋಪಿಯ ಮನೆಯಲ್ಲಿ ಶನಿವಾರ ಘಟನೆ ನಡೆದಿದೆ. ಗುಂಡು ತಗುಲಿ 17 ವರ್ಷದ ಬಾಲಕನ ಕುತ್ತಿಗೆಯ ಮೂಳೆ ಮುರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಆರೋಪಿ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಇಬ್ಬರ ನಡುವೆ ನಡೆದ ಜಗಳದಿಂದ ಆರೋಪಿ ಬಾಲಕ ನನ್ನ ಮಗನನ್ನು ದ್ವೇಷಿಸುತ್ತಿದ್ದ ಎಂದು ಸಂತ್ರಸ್ತನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಹರಿಯಾಣ ಡಿಜಿಪಿ ಒ.ಪಿ.ಸಿಂಗ್ ಅವರು ಪ್ರತಿಕ್ರಿಯಿಸಿ, ಇದು ಅತ್ಯಂತ ದುರದೃಷ್ಟಕರ. ಇಂಥ ಘಟನೆಗಳನ್ನು ತಡೆಯಲು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಪೋಷಕರು ಮತ್ತು ಶಾಲೆಗಳಿಗೆ ಸಲಹೆ ನೀಡಿದ್ದಾರೆ.
ಸಂತ್ರಸ್ತ ಹಾಗೂ ಇಬ್ಬರು ಆರೋಪಿಗಳು ಸಹಪಾಠಿಗಳು. ಸಂತ್ರಸ್ತ ಮೂರು ಬಾರಿಯೂ ಉತ್ತರಿಸದೇ ತನ್ನ ಮೊಬೈಲ್ ಫೋನ್‌ನಲ್ಲೇ ಏನನ್ನೋ ನೋಡುತ್ತಿದ್ದ. ಇದರಿಂದ ಸಿಟ್ಟಾಗಿ ಗುಂಡು ಹಾರಿಸಿರುವುದಾಗಿ ಆರೋಪಿ ವಿಚಾರಣೆಯ ವೇಳೆ ತಿಳಿಸಿದ್ದಾನೆ. ಆರೋಪಿ ಮತ್ತು ಆತನ ಸ್ನೇಹಿತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ ಫರಿದಾಬಾದ್‌ನಲ್ಲಿರುವ ಬಾಲಗೃಹಕ್ಕೆ ಕಳುಹಿಸಲಾಗಿದೆ. ಗಾಯಗೊಂಡಿರುವ ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡು ಆತನ ಕುತ್ತಿಗೆಯ ಮೂಲಕ ಹಾದು ಹೋಗಿದೆ. ಗುಂಡಿನ ಕೆಲವು ತುಣುಕುಗಳು ಸಿಲುಕಿಕೊಂಡಿವೆ. ಇದರಿಂದಾಗಿ ಕುತ್ತಿಗೆಯ ಮೂಳೆ ಮುರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
