ಉದಯವಾಹಿನಿ, ಪಾಟ್ನಾ: ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯ ದಾನಾಪುರ ಕ್ಷೇತ್ರದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿತು.
ಬಬ್ಲು ಖಾನ್ (32), ಇವರ ಪತ್ನಿ ರೋಷನ್ ಖಾತುನ್ (30) ಮತ್ತು ಮಕ್ಕಳಾದ ರುಕ್ಸಾರ್ (12), ಮೊಹಮ್ಮದ್ ಚಂದ್ (10) ಹಾಗೂ ಚಾಂದಿನಿ (2) ಮೃತಪಟ್ವವರು. ಅಕಿಲಪುರ ಠಾಣಾ ವ್ಯಾಪ್ತಿಯ ಮಾನಸ ನಯಾಪಾನಾಪುರದ 42 ಪಟ್ಟಿ ಗ್ರಾಮದಲ್ಲಿನ ಇಂದಿರಾ ಆವಾಸ್ ಯೋಜನೆ (ಐಎವೈ)ಯಡಿ ನಿರ್ಮಿಸಲಾದ ಹಳೆಯ ಮನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಗಂಡ, ಹೆಂಡತಿ ಮತ್ತು ಮಕ್ಕಳು ರಾತ್ರಿ ಊಟ ಮಾಡಿ ಮಲಗಿದ್ದರು. ಗಾಢನಿದ್ರೆಯಲ್ಲಿದ್ದಾಗ ಮೇಲ್ಛಾವಣಿ ಏಕಾಏಕಿ ಕುಸಿದಿದೆ. ಮನೆ ಕುಸಿದ ಶಬ್ದ ಜೋರಾಗಿ ಕೇಳಿಸಿದ್ದರಿಂದ ತಕ್ಷಣವೇ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಮುಂದಾದರು. ಪೊಲೀಸರು ಕೂಡ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಆದರೆ ಅದಾಗಲೇ ಐವರೂ ಸಾವನ್ನಪ್ಪಿದ್ದರು. ಹೀಗಿದ್ದರೂ, ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಎಲ್ಲರೂ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
