ಉದಯವಾಹಿನಿ, ಜಾರಿಗೆ ಎನ್ನುವುದು ತುಳು ಭಾಷೆಯಲ್ಲಿ ಈ ಹಣ್ಣಿನ ಹೆಸರು. ಕನ್ನಡದಲ್ಲಿ ಜೀರಕನ ಹಣ್ಣು, ದೇವಣಿಗೆ ಹಣ್ಣು ಅಥವಾ ಬೆಟ್ಟದ ಹುಣಿಸೆ ಎಂದು ಕರೆಯುತ್ತಾರೆ. ಗಾರ್ಸಿನೀಯಾ ಕುಟುಂಬಕ್ಕೆ ಸೇರಿರುವ ಈ ಹಣ್ಣಿಗೆ ಆಂಗ್ಲ ಭಾಷೆಯಲ್ಲಿ ಗ್ಯಾಂಬೋಜ್ ಅಥವಾ ಯೆಲ್ಲೋ ಮ್ಯಾಂಗೊಸ್ಟೀನ್ ಎಂಬ ಹೆಸರಿದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಹಜವಾಗಿ ಬೆಳೆಯು ತ್ತವೆ. ಇವು ೧೦ ರಿಂದ ೧೫ ಮೀಟರ್ ಗಳಷ್ಟು ಎತ್ತರ ಬೆಳೆಯುತ್ತವೆ.
ಉಡುಪಿ ಜಿಲ್ಲೆಯ ಜಾರ್ಕಳದ ಬಳಿಯ ನಮ್ಮ ಕುಟುಂಬದ ನಾಗಬನದಲ್ಲಿ ಇತ್ತೀಚೆಗೆ ಇದು ಕಾಣ ಸಿಕ್ಕಿತು. ದಟ್ಟ ಕಾಂಡದ ಈ ಮರಗಳ ಕೆಳಗೆ ನಾಗರಕಲ್ಲುಗಳನ್ನು ನಾಗಬನಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದು ಈ ಮರಗಳಿಗೆ ನಾವು ನೀಡುವ ಪಾವಿತ್ರ್ಯತೆಯ ಸಂಕೇತ ವೆನಿಸುತ್ತದೆ!
ಈ ವೃಕ್ಷದ ಕಾಂಡವು ಹೆಬ್ಬಾವಿನ ಚರ್ಮದ ವಿನ್ಯಾಸ ಹಾಗೂ ಬಣ್ಣವನ್ನು ಪಡೆದಿರು ವುದೂ ವಿಶೇಷ! ಮಾವಿನೆಲೆಗಳನ್ನು ಹೋಲುವ ಆದರೆ ಅವಕ್ಕಿಂತ ದೊಡ್ಡದಾದ ಸುಮಾರು ಒಂದಡಿ ಉದ್ದ ಹಾಗೂ ಮೂರ್ನಾಲ್ಕು ಇಂಚು ಅಗಲದ ಗಾಢ ಹಸಿರಿನ ಸುದೃಢ ಎಲೆಗಳನ್ನು ಹೊಂದಿರುತ್ತವೆ.
ಹಸಿರು ಮಿಶ್ರಿತ ಬಿಳಿ ಹೂ ಬಿಡುವ ಈ ವೃಕ್ಷದ ಹಸಿರು ಕಾಯಿಗಳು ಬಲಿತು ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗಿ ಹಣ್ಣಾಗಿ ಮಾಗಿದಾಗ ತಿನ್ನಲು ಯೋಗ್ಯ. ಹಣ್ಣುಗಳ ಗಾತ್ರವೂ ಕಿತ್ತಳೆಯಷ್ಟೇ ಇರುತ್ತದೆ. ಹಣ್ಣಿನೊಳಗೆ ನಾಲ್ಕೈದು ಬೀಜ ಸಹಿತ ಸೊಳೆಗಳಿದ್ದು ಮಾಂಸಲವಾಗಿರುತ್ತದೆ; ಮಾಂಸಲ ಭಾಗವನ್ನು ತಿನ್ನಬಹುದು.
ಸಿಪ್ಪೆ ದಪ್ಪವಾದರೂ ಮೃದುವಾಗಿದ್ದು ಸುಲಭವಾಗಿ ಸುಲಿಯಬಹುದಾಗಿದೆ. ಹುಳಿ ಮಿಶ್ರಿತ ಸಿಹಿಯ ವಿಶಿಷ್ಟ ರುಚಿ ಬಾಯಲ್ಲಿ ನೀರೂರಿಸುತ್ತದೆ. ಜಾಸ್ತಿ ತಿಂದರೆ ಹೊಟ್ಟೆ ನೋವುಂಟಾ ಗುತ್ತದೆ. ಕಳಿತ ಹಣ್ಣುಗಳ ಸಿಪ್ಪೆ ಬೇರ್ಪಡಿಸಿ ಅದಕ್ಕೆ ಉಪ್ಪು ಹಚ್ಚಿ, ಸುಮಾರು ಒಂದು ತಿಂಗಳ ಕಾಲ ಒಣಗಿಸಿ, ದೀರ್ಘ ಕಾಲ ಸಂಗ್ರಹಿಸುವ ಪದ್ಧತಿ ಇದೆ.

Leave a Reply

Your email address will not be published. Required fields are marked *

error: Content is protected !!