ಉದಯವಾಹಿನಿ: ಅನೇಕ ಹಲವು ಪೋಷಕರು ತಮ್ಮ ಮಕ್ಕಳು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡುವುದಿಲ್ಲ ಎಂದು ಬೇಸರಗೊಳ್ಳುತ್ತಾರೆ. ಪಾಲಕರ ವಿವಿಧ ಪ್ರಯತ್ನಗಳ ಹೊರತಾಗಿಯೂ ಮಕ್ಕಳು ಸರಿಯಾಗಿ ನಿದ್ರಿಸಲು ತುಂಬಾ ಕಷ್ಟಪಡುತ್ತಾರೆ. ಪೋಷಕರು ರಾತ್ರಿಯಿಡೀ ಆತಂಕಕ್ಕೊಳಗಾಗುವಂತೆ ಮಾಡುವುದರ ಜೊತೆಗೆ ಮರುದಿನ ಮಕ್ಕಳ ಮೇಲೆ ಕೋಪಗೊಳ್ಳುವಂತೆ ಮಾಡುತ್ತದೆ.
ನಂತರದಲ್ಲಿ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ. ಇದೇ ರೀತಿಯಾದ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದೀರಾ? ಈ ಕುರಿತಂತೆ ಪೌಷ್ಟಿಕತಜ್ಞೆ ಲವನೀತ್ ಬಾತ್ರಾ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿಮ್ಮ ಮಗು ರಾತ್ರಿಯಲ್ಲಿ ಬೇಗನೆ ನಿದ್ರಿಸಲು ಸಾಧ್ಯವಾಗದಿದ್ದರೆ ಕೇವಲ ಆಯಾಸ ಹಾಗೂ ಹಗಲಿನ ಚಟುವಟಿಕೆಯಿಂದಲ್ಲ, ಮಕ್ಕಳ ಆಹಾರ ಕ್ರಮದಿಂದ ಈ ರೀತಿಯಾಗುತ್ತಿರಬಹುದು ಎಂದು ಪೌಷ್ಟಿಕ ತಜ್ಞರು ವಿವರಿಸುತ್ತಾರೆ. ಮಕ್ಕಳು ಸಂಜೆ 4 ಗಂಟೆಯಿಂದ ಮಲಗುವ ಸಮಯದವರೆಗೆ ಯಾವ ಆಹಾರ ಸೇವಿಸುತ್ತಾರೆ ಎಂಬುದು ಅವರ ನಿದ್ರೆಯ ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಚಿಕ್ಕ ಮಕ್ಕಳಿಗೆ ಸರಿಯಾದ ಆಹಾರ ನೀಡಿದರೆ ಬೇಗನೆ ಹಾಗೂ ಗಾಢವಾಗಿ ನಿದ್ರಿಸಲು ಸಾಧ್ಯವಾಗುತ್ತದೆ.
ಒಳ್ಳೆಯ ನಿದ್ರೆಗಾಗಿ ಮಗುವಿಗೆ ಯಾವ ಆಹಾರ ನೀಡಬೇಕು? ಕೆಲವು ಆಹಾರಗಳು ಮಕ್ಕಳ ದೇಹದಲ್ಲಿ ಮೆಲಟೋನಿನ್, ಸಿರೊಟೋನಿನ್ ಹಾಗೂ ಮೆಗ್ನೀಸಿಯಮ್‌ನಂತಹ ಅಂಶಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಇವುಗಳಿಂದ ಮನಸ್ಸು ಶಾಂತಗೊಳ್ಳುತ್ತದೆ, ನಿದ್ರೆಯನ್ನು ಪ್ರೇರೇಪಿಸಲು ತುಂಬಾ ಸಹಾಯಕವಾಗುತ್ತದೆ. ಮಕ್ಕಳ ನಿದ್ರೆಗೆ ಯಾವ ಆಹಾರ ಅನುಕೂಲಕರ ಎಂಬುದರ ಬಗ್ಗೆ ಪೌಷ್ಟಿಕ ತಜ್ಞರು ವಿವರವಾಗಿ ತಿಳಿಸಿದ್ದಾರೆ.
ಸಿಹಿ ಗೆಣಸು- ತುಪ್ಪ ಒಳ್ಳೆಯದು: ಸಿಹಿ ಗೆಣಸನ್ನು ಕುದಿಸಿ ಹಿಸುಕಿ ಅದಕ್ಕೆ ಅರ್ಧ ಟೀಸ್ಪೂನ್ ತುಪ್ಪ, ಒಂದು ಚಿಟಿಕೆ ದಾಲ್ಚಿನ್ನಿ ಸೇರಿಸಿ ಮತ್ತು ನಿಮ್ಮ ಮಗುವಿಗೆ ತಿನ್ನಿಸಿ. ಇದರಲ್ಲಿ ವಿಟಮಿನ್ ಬಿ 6 ಸಮೃದ್ಧವಾಗಿದೆ. ಇದು ಮೆಲಟೋನಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತವೆ. ಮಕ್ಕಳಲ್ಲಿ ಉಂಟಾಗುವ ಕಿರಿಕಿರಿಯನ್ನು ನಿಯಂತ್ರಿಸುತ್ತದೆ. ಮಗು ಸುಲಭವಾಗಿ ನಿದ್ರಿಸಲು ಪೂರಕವಾಗುತ್ತದೆ ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.
ಓಟ್ಸ್ ಗಂಜಿ, ಕುಂಬಳಕಾಯಿ ಬೀಜ ಉತ್ತಮ: ಅರ್ಧ ಕಪ್ ಹಾಲಿನಲ್ಲಿ ಎರಡು ಚಮಚ ಓಟ್ಸ್ ಬೇಯಿಸಿ ಮತ್ತು ಅದರ ಮೇಲೆ ಒಂದು ಟೀಸ್ಪೂನ್ ಕುಂಬಳಕಾಯಿ ಬೀಜಗಳನ್ನು ಸೇರಿಸಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಬೇಕಾಗುತ್ತದೆ. ಇದರಲ್ಲಿ ಮೆಗ್ನೀಸಿಯಮ್, ಟ್ರಿಪ್ಟೊಫಾನ್ ಹೇರಳವಾಗಿದೆ. ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಜೊತೆಗೆ ಮಗು ವೇಗವಾಗಿ ನಿದ್ರಿಸಲು ಅನುಕೂಲವಾಗುತ್ತದೆ.
ಬಾಳೆಹಣ್ಣು- ಬಾದಾಮಿ ಬೆಣ್ಣೆ ರೋಲ್ ಅತ್ಯುತ್ತಮ: ಒಂದು ಟೀಸ್ಪೂನ್ ಬಾದಾಮಿ ಬೆಣ್ಣೆಯನ್ನು ಚಪಾತಿಗೆ ಹಚ್ಚಿ ಅದರಲ್ಲಿ ಬಾಳೆಹಣ್ಣನ್ನು ಸುತ್ತಬೇಕು. ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಗುವಿಗೆ ತಿನ್ನಿಸಬೇಕು. ಬಾಳೆಹಣ್ಣು ಮತ್ತು ಬಾದಾಮಿ ಬೆಣ್ಣೆ ಎರಡರಲ್ಲೂ ಟ್ರಿಪ್ಟೊಫಾನ್ ಮತ್ತು ಮೆಗ್ನೀಸಿಯಮ್ ಇದೆ. ಜೊತೆಗೆ ಸಿರೊಟೋನಿನ್ ಮಟ್ಟವನ್ನು ಅಧಿಕಗೊಳಿಸುತ್ತದೆ. ಮಗುವಿಗೆ ಸಂತೋಷ ಹಾಗೂ ವಿಶ್ರಾಂತಿ ಒದಗಿಸುತ್ತದೆ. ಚಿಕ್ಕ ಮಕ್ಕಳು ವೇಗವಾಗಿ ನಿದ್ರಿಸಲು ಹೆಚ್ಚು ಅನುಕೂಲವಾಗುತ್ತದೆ.
