ಉದಯವಾಹಿನಿ, ನವದೆಹಲಿ: ಸುಮಾರು 20 ವರ್ಷಗಳ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನೋಯ್ಡಾದ ಸೀರಿಯಲ್ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 2006ರ ನಿಥಾರಿ ಸೀರಿಯಲ್ ಕಿಲ್ಲಿಂಗ್ ಕೇಸ್ ಎಂದೇ ಕುಖ್ಯಾತಿ ಪಡೆದಿರುವ ಈ ಕೇಸ್‌ನ ಪ್ರಮುಖ ಆರೋಪಿ ಸುರೇಂದ್ರ ಕೋಲಿಯನ್ನು ಸುಪ್ರೀಂ ಕೋರ್ಟ್ ಕೊನೆಯ ಪ್ರಕರಣದಿಂದಲೂ ಖುಲಾಸೆಗೊಳಿಸಿದೆ. ಅಲ್ಲದೇ ಆತನ ಇನ್ನು ಯಾವುದೇ ಪ್ರರಕಣದಲ್ಲಿ ಆರೋಪಿಯಾಗಿಲ್ಲ. ಹೀಗಾಗಿ ಆತನನ್ನು ತಕ್ಷಣ ರಿಲೀಸ್ ಮಾಡುವಂತೆ ಆದೇಶ ಹೊರಡಿಸಿದೆ. ಇಂದು ಹೊರಬಂದಿರುವ ಈ ತೀರ್ಪಿನೊಂದಿಗೆ, ಸುಪ್ರೀಂ ಕೋರ್ಟ್ ಭಾರತದ ಇತಿಹಾಸದಲ್ಲಿ ಅತ್ಯಂತ ಭಯಾನಕ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ.
ನಿಥಾರಿ ಕೊಲೆ ಪ್ರಕರಣಗಳ ಪೈಕಿ ಬಾಕಿ ಉಳಿದಿದ್ದ ಒಂದು ಕೇಸ್‌ನಲ್ಲಿ ಕೋಲಿ ತನ್ನ ಅಪರಾಧ ಸಾಬೀತು ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ. ಕೋಲಿ ಈಗಾಗಲೇ ಎಲ್ಲಾ ಇತರ ನಿಥಾರಿ ಪ್ರಕರಣಗಳಲ್ಲಿ ಖುಲಾಸೆಗೊಂಡಿರುವುದರಿಂದ ಆತ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾನೆ.
