ಉದಯವಾಹಿನಿ, ದೇಶದ ಹೆಮ್ಮೆಯ ಮತ್ತು ಸಾರ್ವಭೌಮತೆಯ ಪ್ರತೀಕವಾಗಿದ್ದ ಕೆಂಪುಕೋಟೆಯ ಬಳಿ ಸೋಮವಾರ ಸಂಜೆ ನಡೆದ ಭಯೋತ್ಪಾದಕರ ದಾಳಿ ದೇಶಾದ್ಯಂತ ತಲ್ಲಣ ಮೂಡಿಸಿದೆ. ಫರೀದಾಬಾದ್‌ನಲ್ಲಿ ಪತ್ತೆಯಾಗಿದ್ದ ಭಾರಿ ಸ್ಫೋಟಕಗಳಿಗೂ ದಿಲ್ಲಿಯಲ್ಲಿ ನಡೆದಿರುವ ಸ್ಫೋಟಕ್ಕೂ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ. ಭಾರತದ ಹೃದಯ ಭಾಗದಲ್ಲಿ ಜನ ಸಂದಣಿ ಇದ್ದ ಪ್ರದೇಶದಲ್ಲಿ ರಾಷ್ಟ್ರ ವಿದ್ರೋಹಿ, ವಿಧ್ವಂಸಕ ಕೃತ್ಯ ಎಸಗಲಾಗಿದೆ. ಆದರೆ ಉಗ್ರರ ಬೃಹತ್ ದಾಳಿಯ ಷಡ್ಯಂತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭೇದಿಸಲಾಗುತ್ತಿದೆ.
ಫರೀದಾಬಾದ್ ಕೇವಲ ಕಾಕತಾಳೀಯ ಘಟನೆಯಲ್ಲ. ಇದು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯ. ವೈದ್ಯರ ನಿವಾಸದಿಂದ 2,900 ಕಿಲೋ ಗ್ರಾಮ್‌ನಷ್ಟು ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಸಲ ಉಗ್ರರು ತಲೆಗೆ ರುಮಾಲು ಧರಿಸಿರಲಿಲ್ಲ, ಹರಿದ ಬ್ಯಾಗ್ ಹೆಗಲಿನಲ್ಲಿ ಹಾಕಿಕೊಂಡಿರಲಿಲ್ಲ. ಈ ಸಲ ಬಿಳಿಯ ಕೋಟ್ ಧರಿಸಿದ್ದರು. ಸುಶಿಕ್ಷಿತ ಉಗ್ರರಾಗಿದ್ದರು. ಬೀದಿ ರೌಡಿಗಳಾಗಿರಲಿಲ್ಲ. ಶಾಂತಿ ಕದಡಲು ಸಿದ್ಧರಾಗಿದ್ದ ವೈಟ್ ಕೋಟಿನ ಸುಶಿಕ್ಷಿತರಾಗಿದ್ದರು. ಆದರೆ ಮೋದಿ ಸರಕಾರದ ರಚನಾತ್ಮಕ ಬುದ್ಧಿಮತ್ತೆ ಉಗ್ರರ ದೊಡ್ಡ ಮಟ್ಟದ ವಿಧ್ವಂಸಕ ಷಡ್ಯಂತ್ರವನ್ನು ವಿಫಲಗೊಳಿಸಿದೆ.
