ಉದಯವಾಹಿನಿ, ಕೋಲ್ಕತಾ: ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದ ಭಾರತ ತಂಡ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲು ಎದುರು ನೋಡುತ್ತಿದೆ. ಮೊದಲನೇ ಟೆಸ್ಟ್ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನವೆಂಬರ್ 14 ರಂದು ಆರಂಭವಾಗಲಿದೆ. ಈ ಪಂದ್ಯದ ನಿಮಿತ್ತ ಭಾರತ ತಂಡದ ಪ್ಲೇಯಿಂಗ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಟೀಮ್ ಇಂಡಿಯಾದ ಸಹಾಯಕ ಕೋಚ್ ರಯಾನ್ ಟೆನ್ ಡಷ್ಕಟೇ, ಭಾರತ ತಂಡದ ಪ್ಲೇಯಿಂಗ್ ಧ್ರುವ್ ಜುರೆಲ್ ಆಡಲಿದ್ದಾರೆಂದು ಖಚಿತಪಡಿಸಿದ್ದಾರೆ.
“ಈ ವಾರ ಧ್ರುವ್ ಜುರೆಲ್ ಹಾಗೂ ರಿಷಭ್ ಪಂತ್ ಇಬ್ಬರೂ ಆಡಿಲ್ಲವಾದರೆ, ನನಗೆ ತುಂಬಾ ಅಚ್ಚರಿಯಾಗಲಿದೆ,” ಎಂದು ರಯಾನ್ ಟೆನ್ ಡಷ್ಕಟೇ ತಿಳಿಸಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಹಾಗೂ ಧ್ರುವ್ ಜುರೆಲ್ ಇಬ್ಬರೂ ಆಡಲಿದ್ದಾರೆಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಇದರ ಪ್ರಕಾರ ವಿಕೆಟ್ ಕೀಪರ್ ಆಗಿ ಪಂತ್ ಆಡಿದರೆ, ಹೆಚ್ಚುವರಿ ಬ್ಯಾಟ್ಸ್‌ಮನ್ ಆಗಿ ಧ್ರುವ್ ಜುರೆಲ್ ಆಡಬಹುದು.
ಕಳೆದ ಒಂದೂವರೆ ವರ್ಷದಿಂದ ಧ್ರುವ್ ಜುರೆಲ್ ಅವರು ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಕ ಸೀಮಿತ ಅವಕಾಶಗಳಲ್ಲಿ ಗಮನ ಸೆಳೆದಿದ್ದಾರೆ. ಸೆಪ್ಟಂಬರ್ ತಿಂಗಳಿನಿಂದ ಜುರೆಲ್ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದ್ದಾರೆ. ಅವರು ಆಡಿದ 5 ಪಂದ್ಯಗಳಿಂದ ಕ್ರಮವಾಗಿ 140, 56, 125, 44, 132* ಹಾಗೂ 127 ರನ್‌ಗಳನ್ನು ಕಲೆ ಹಾಕಿದ್ದಾರೆ. ರಣಜಿ ಟ್ರೋಫಿ, ಟೆಸ್ಟ್, ಭಾರತ ಎ ಪರ ಈ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇವರ ಪ್ರಥಮ ದರ್ಜೆ ಕ್ರಿಕೆಟ್‌ನ ಸರಾಸರಿ 47.34 ರಿಂದ 58 ರಷ್ಟಿದೆ.
