ಉದಯವಾಹಿನಿ, ಅಹಮದಾಬಾದ್: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ದಿನ. ಹೌದು, ರೋಹಿತ್ ಶರ್ಮ ನೇತೃತ್ವದ ಭಾರತ ತಂಡದ ಮೂರನೇ ಏಕದಿನ ವಿಶ್ವಕಪ್ ಪ್ರಶಸ್ತಿ ಕನಸು ನುಚ್ಚುನೂರಾದ ದಿನವಿದು. ಫೈನಲ್ ತನಕ ಸೋಲಿಲ್ಲದೆ ಸಾಗಿ ಬಂದಿದ್ದ ಭಾರತ ತಂಡಕ್ಕೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಅಂತರದ ಸೋಲು ಎದುರಾಗಿತ್ತು. ಗೆಲುವು ಸಾಧಿಸಿದ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು. ಭಾರತದ ಈ ಸೋಲಿನ ಕಹಿ ನೆನಪಿಗೆ ಇಂದಿಗೆ 2 ವರ್ಷ ತುಂಬಿದೆ.
ನವೆಂಬರ್ 19, 2023ರಲ್ಲಿ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 240 ರನ್ ಗಳಿಸಿ ಆಲೌಟ್ ಆಯಿತು. ಟ್ರಾವಿಸ್ ಹೆಡ್ ಗಳಿಸಿದ ಅಮೋಘ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಇನ್ನೂ 7 ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ತಲುಪಿತು.
ಮೊದಲು ಬ್ಯಾಟ್ ಮಾಡಿದ ಭಾರತ ಪರ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಹೊರತುಪಡಿಸಿ ಉಳಿದವರ ಬ್ಯಾಟ್‌ನಿಂದ ರನ್ ಬರಲಿಲ್ಲ. ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ (4) ಐದನೇ ಓವರ್‌ನಲ್ಲೇ ಔಟಾದರು. ಆದರೂ, ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ ಕೇವಲ 31 ಎಸೆತಗಳಲ್ಲಿ 47 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾಗ ವಿಕೆಟ್ ಕೈಚೆಲ್ಲಿದರು. ಶ್ರೇಯಸ್ ಅಯ್ಯರ್‌ಗೆ (4) ಪ್ಯಾಟ್ ಕಮಿನ್ಸ್ ಪೆವಿಲಿಯನ್ ದಾರಿ ತೋರಿದರು. ತಂಡದ ಮೊತ್ತ 3 ವಿಕೆಟ್‌ಗೆ 81 ರನ್ ಆಗಿದ್ದಾಗ ಜೊತೆಯಾದ ಕೊಹ್ಲಿ ಮತ್ತು ರಾಹುಲ್, ನಾಲ್ಕನೇ ವಿಕೆಟ್‌ಗೆ 67 ರನ್ ಕೂಡಿಸಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ 29ನೇ ಓವರ್‌ನಲ್ಲಿ ಅದೃಷ್ಟ ಕೈಕೊಟ್ಟಿತು.
