ಉದಯವಾಹಿನಿ,ಧಾರವಾಡ: ಜುಲೈ 2 ರಂದು ಕಜಕಿಸ್ಥಾನ ದೇಶದ ರಾಜಧಾನಿ ಆಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆ ಆಯೋಜಿಸಲಾಗಿತ್ತು. 3.9 ಕಿ.ಮೀ ಈಜು, 180 ಕಿ. ಮೀ ಸೈಕ್ಲಿಂಗ್ ಹಾಗೂ 42 ಕೀ.ಮೀ. ಓಟವನ್ನು 13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ ಅಂತರರಾಷ್ಟ್ರೀಯ ಐರನ್ ಮ್ಯಾನ್ ಸದಾನಂದ ಅಮರಾಪುರ ಅವರು ಸಾಧನೆ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿಯಾಗಿದ್ದು, ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಂತರರಾಷ್ಟ್ರೀಯ ಐರನ್ ಮ್ಯಾನ್ ಆಗಿರುವ ಸದಾನಂದ ಅಮರಾಪುರ ಅವರನ್ನು ತಮ್ಮ ಕಚೇರಿಗೆ ಕರೆದು ಆತ್ಮೀಯವಾಗಿ ಅಭಿನಂದಿಸಿ, ಗೌರವಿಸಿದರು. ವಿದ್ಯಾರ್ಥಿ ದೆಸೆಯಿಂದಲೂ ಕ್ರೀಡಾಪಟುವಾಗಿದ್ದ ಸದಾನಂದ ಅಮರಾಪುರ ಅವರು ಈ ಅಂತರರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ 62 ದೇಶಗಳಿಂದ ಭಾಗವಹಿಸಿದ್ದ 1200 ಸ್ಪರ್ಧಾಳುಗಳನ್ನು ಹಿಂದಿಕ್ಕಿ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಇವರು ದಿವಂಗತ ಹನುಮಂತಪ್ಪ ನಿ. ಅಮರಾಪುರ ಡಿವೈಎಸ್ಪಿ ರವರ ಪುತ್ರರಾಗಿದ್ದಾರೆ. ತಂದೆಯಂತೆ ಕುಸ್ತಿಯಲ್ಲಿ ಆಸಕ್ತಿ ಹೊಂದಿರುವ ಇವರು ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
