ಉದಯವಾಹಿನಿ,ಕಲಬುರಗಿ: ರಾಜ್ಯದ ಅನೇಕ ಕಡೆ ವರುಣನ ಅಬ್ಬರ ಹೆಚ್ಚಾಗಿದ್ದು, ಜನರು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದ್ರೆ ನಮ್ಮದೇ ರಾಜ್ಯದ ಕಲಬುರಗಿ ಜನರ ಮೇಲೆ ವರುಣದೇವ ಮುನಿಸಿಕೊಂಡಿದ್ದಾನೆ. ವರುಣ ಕೃಪೆಗಾಗಿ ಜನರು ಹತ್ತಾರು ರೀತಿಯ ಆಚರಣೆಗಳನ್ನು ಮಾಡಿದ್ದಾರೆ. ಆದ್ರೆ ಮುನಿಸು ಮರೆತು ವರುಣ ತಂಪೆರೆಯುತ್ತಿಲ್ಲ. ಮತ್ತೊಂದಡೆ ಬರಗಾಲ ಘೋಷಣೆಗೆ ಆಗ್ರಹ ಜೋರಾಗುತ್ತಿದೆ. ಕಲಬುರಗಿ ಜಿಲ್ಲೆಯ ರೈತರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಜನರಿಗೆ ಕೂಡಾ ಆತಂಕ ಆರಂಭವಾಗಿದೆ. ರಾಜ್ಯದ ಅನೇಕ ಕಡೆ ಮಳೆಯ ಅಬ್ಬರ ಹೆಚ್ಚಾಗಿದೆ. ಆದರೆ ಬಿಸಿಲನಾಡು ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಮಳೆಯಾಗುತ್ತಿಲ್ಲಾ. ಜೂನ್ 1 ರಿಂದ ಜುಲೈ 11 ರವರಗೆ ಕಲಬುರಗಿ ಜಿಲ್ಲೆಯಲ್ಲಿ 149 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ ಆಗಿದ್ದು ಕೇವಲ 96 ಮೀಲಿ ಮೀಟರ್ ಮಾತ್ರ. ಅಂದ್ರೆ 36 ರಷ್ಟು ಮಳೆ ಕೊರತೆಯಿದೆ. ಇನ್ನು ಆಗಿರುವ 96 ಮೀಲಿ ಮೀಟರ್ ಮಳೆ ಕೂಡಾ ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನಲ್ಲಿ ಮಾತ್ರ. ಅಫಜಲಪುರ,ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ ಸೇರಿದಂತೆ ಕೆಲ ತಾಲೂಕುಗಳಲ್ಲಿ ಶೇಕಾಡ ಎಪ್ಪತ್ತರಿಂದ ಎಂಬತ್ತರಷ್ಟು ಮಳೆ ಕೊರತೆಯಾಗಿದೆ.
