ಉದಯವಾಹಿನಿ, ಶಿವಮೊಗ್ಗ: ಇಲ್ಲಿನ ಸೋಗಾನೆಯಲ್ಲಿರುವ ಜೈಲಿಗೆ (Jail) ಆಟೋ ಚಾಲಕನೊಬ್ಬ ಬಾಳೆಗೊನೆಗಳಲ್ಲಿ ಗಾಂಜಾ ತುಂಬಿ ತಂದು ಗೇಟಿನ ಬಳಿ ಇಟ್ಟು ಹೋಗಿದ್ದಾನೆ.
ನ.19ರ ಮದ್ಯಾಹ್ನ 02:15ಕ್ಕೆ ಆಟೋದಲ್ಲಿ ಐದು ಬಾಳೆಗೊನೆಗಳನ್ನು ಕಾರಾಗೃಹದ ಮುಂಭಾಗಕ್ಕೆ ತಂದು ಇಟ್ಟಿದ್ದಾನೆ. ಕ್ಯಾಂಟೀನ್‌ನವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ ತೆರಳಿದ್ದಾನೆ. ಬಳಿಕ ಕಾರಾಗೃಹದ ಮುಖ್ಯ ದ್ವಾರದ ಉಸ್ತುವಾರಿಯಲ್ಲಿದ್ದ ಕೆ.ಎಸ್.ಐ.ಎಸ್.ಎಫ್ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪ್ರೊಬೆಶನರಿ ಪಿಎಸ್ಐ ಪ್ರಭು ಎಸ್. ಹಾಗೂ ಸಿಬ್ಬಂದಿ ಬಾಳೆಗೊನೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಬಾಳೆಗೊನೆಯ ದಿಂಡನ್ನು ಕೊರೆದು ಅದರೊಳಗೆ ಗಾಂಜಾ ಹಾಗೂ ಸಿಗರೇಟನ್ನು ಟೇಪ್‌ನಲ್ಲಿ ಸುತ್ತಿ ಇಟ್ಟಿರುವುದು ಪತ್ತೆಯಾಗಿದೆ. ಅಧಿಕಾರಿಗಳು 123 ಗ್ರಾಂ ಗಾಂಜಾ ಮತ್ತು 40 ಸಿಗರೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಒಳ ಉಡುಪಲ್ಲಿ ಗಾಂಜಾ ಪತ್ತೆ: ಕೇಂದ್ರ ಕಾರಾಗೃಹದ ಎಸ್.ಡಿ.ಎ ಸಾತ್ವಿಕ್ (25) ಕರ್ತವ್ಯಕ್ಕೆ ಹಾಜರಾಗಲು ಬಂದಾಗ ಆತನನ್ನು ತಪಾಸಣೆ ಮಾಡಿದಾಗ ಒಳ ಉಡುಪಿನಲ್ಲಿ ಗಮ್ ಟೇಪಿನಲ್ಲಿ ಸುತ್ತಿರುವ ಗಾಂಜಾ ಪತ್ತೆಯಾಗಿದೆ. 170 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!