ಉದಯವಾಹಿನಿ, ವಾಷಿಂಗ್ಟನ್: ಇರಾನ್‌ನ ಪೆಟ್ರೋಲಿಯಂ, ಮತ್ತದರ ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಭಾರತೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನಿರ್ಬಂಧ ಹೇರಿದೆ. ಈ ವ್ಯಾಪಾರದಿಂದ ಬರುವ ಹಣ ಟೆಹ್ರಾನ್‌ನ ಪ್ರಾದೇಶಿಕ ಭಯೋತ್ಪಾದಕ ಪ್ರಾಕ್ಸಿಗಳಿಗೆ ಬೆಂಬಲ ನೀಡುತ್ತದೆ. ಮತ್ತು ಅಮೆರಿಕಕ್ಕೆ ನೇರ ಬೆದರಿಕೆಯಾಗಿರುವ ಶಸ್ತ್ರಾಸ್ತ್ರ ವ್ಯವಸ್ಥೆಗಳ ಖರೀದಿಗೂ ನೆರವಾಗುತ್ತಿದೆ ಎಂದು ಹೇಳಿದೆ.ಅಮೆರಿಕದ ವಿದೇಶಾಂಗ ಮತ್ತು ಖಜಾನೆ ಇಲಾಖೆ, ಅಕ್ರಮ ತೈಲ ಮಾರಾಟದ ಮೂಲಕ ಇರಾನ್‌ನ ದುರುದ್ದೇಶಪೂರಿತ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ದಾರಿ ಮಾಡಿಕೊಟ್ಟಿರುವ ಮತ್ತು ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪುಗಳಿಗೆ ಶಸ್ತ್ರಾಸ್ತ್ರ, ವಿಮಾನಗಳನ್ನು ಪೂರೈಕೆಗೆ ಸಹಕರಿಸುತ್ತಿರುವ ಹಡಗು ಜಾಲದ ಮೇಲೂ ನಿರ್ಬಂಧ ಹೇರಿದೆ.
ಅಮೆರಿಕ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ಸಿದ್ದಪಡಿಸಿರುವ ಪಟ್ಟಿಯಲ್ಲಿ, ಭಾರತೀಯ ಪ್ರಜೆಗಳಾದ ಜೈರ್ ಹುಸೇನ್ ಇಕ್ಬಾಲ್ ಹುಸೇನ್ ಸಯೀದ್, ಜುಲ್ಫಿಕರ್ ಹುಸೇನ್ ರಿಜ್ವಿ ಸಯೀದ್, ಮಹಾರಾಷ್ಟ್ರ ಮೂಲದ ಆರ್‌ಎನ್ ಶಿಪ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಪುಣೆ ಮೂಲದ ಟಿಆರ್6 ಪೆಟ್ರೋ ಇಂಡಿಯಾ ಎಲ್‌ಎಲ್‌ಪಿ ಸೇರಿವೆ.
ಇರಾನ್‌ನ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಲ್ಲಿ ಭಾಗಿಯಾಗಿರುವ ಭಾರತ, ಪನಾಮ ಮತ್ತು ಸೀಶೆಲ್ಸ್ ಸೇರಿದಂತೆ ಇತರೆ ಹಲವಾರು ದೇಶಗಳ 17 ಸಂಸ್ಥೆಗಳು, ವ್ಯಕ್ತಿಗಳು ಮತ್ತು ಹಡಗುಗಳನ್ನು ವಿದೇಶಾಂಗ ಇಲಾಖೆ ಗುರುತಿಸಿದೆ ಎಂದು ಅಮೆರಿಕ ಆಡಳಿತ ತಿಳಿಸಿದೆ.
ಮತ್ತೊಂದೆಡೆ, ಖಜಾನೆ ಇಲಾಖೆ 41 ಸಂಸ್ಥೆಗಳು, ವ್ಯಕ್ತಿಗಳು, ಹಡಗುಗಳು ಮತ್ತು ವಿಮಾನಗಳನ್ನು ಗುರುತಿಸಿದೆ. ಜೊತೆಗೆ ಇರಾನ್‌ನ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ರಫ್ತಿನ ವಿರುದ್ಧ ಕ್ರಮಗಳನ್ನು ತೀವ್ರಗೊಳಿಸುತ್ತಿದೆ ಮತ್ತು ಇರಾನ್‌ನ ದುರುದ್ದೇಶಪೂರಿತ ಚಟುವಟಿಕೆಗಳನ್ನು ಬೆಂಬಲಿಸುವ ಹಣ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತದೆ.
