ಉದಯವಾಹಿನಿ, ಮ್ಯಾಡ್ರಿಡ್: ಪಾಶ್ಚಿಮಾತ್ಯ ರಾಜಕೀಯದಲ್ಲಿ ಪ್ರಜಾಪ್ರಭುತ್ವದ ಕನಿಷ್ಠ ಮೌಲ್ಯಗಳು ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ನಾಯಕರು ವಿರಳವಾಗುತ್ತಿರುವ ಸಂದರ್ಭದಲ್ಲಿ, ಸ್ಪೇನ್ ಪ್ರಧಾನಮಂತ್ರಿ ಪೆಟ್ರೊ ಸ್ಯಾಂಚೆಜ್ ತಮ್ಮ ಯುದ್ಧ ವಿರೋಧಿ ನಿಲುವಿನಿಂದ ವಿಭಿನ್ನ ಧ್ವನಿಯಾಗಿ ಹೊರಹೊಮ್ಮಿದ್ದಾರೆ.ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಗಳ ನಂತರ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದನ್ನು ಖಂಡಿಸಿದ ಕೆಲವೇ ದೇಶಗಳಲ್ಲಿ ಸ್ಪೇನ್ ಪ್ರಮುಖವಾಗಿದೆ. “ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಗಳಿಗೆ ಅವಕಾಶ ಕೊಡಬಾರದು. ಬಾಂಬ್ ಗಳಿಂದ ಸಮಸ್ಯೆಗಳನ್ನು ಪರಿಹರಿಸುವ ಭ್ರಮೆಗೆ ಒಳಗಾಗಬಾರದು. ಹಿಂದಿನ ತಪ್ಪುಗಳನ್ನು ಮರುಕಳಿಸಬಾರದು. ಯುದ್ಧಕ್ಕೆ ‘ಇಲ್ಲ’ ಎಂದು ಹೇಳಬೇಕು” ಎಂದು ಪ್ರಧಾನಮಂತ್ರಿ ಪೆಟ್ರೊ ಸ್ಯಾಂಚೆಜ್ ಹೇಳಿದ್ದಾರೆ.

ಇದು ತಾತ್ಕಾಲಿಕ ಪ್ರತಿಕ್ರಿಯೆಯಲ್ಲ; ಬಹುಕಾಲದಿಂದ ರೂಪುಗೊಂಡ ನಿಲುವಾಗಿದೆ. ಫೆಲೆಸ್ತೀನ್ ವಿಚಾರದಲ್ಲಿ ಸ್ಪೇನ್ ನಿರಂತರ ಬೆಂಬಲ ವ್ಯಕ್ತಪಡಿಸುತ್ತಿದೆ. ಫೆಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಿದೆ. ಇಸ್ರೇಲ್ ವಿರುದ್ಧವೂ ಹಲವು ಕ್ರಮಗಳನ್ನು ಕೈಗೊಂಡಿದೆ. ಯೂರೋವಿಷನ್ ಗೆ ವಿರೋಧ ವ್ಯಕ್ತಪಡಿಸಿದೆ. ಕ್ರೀಡಾ ನಿರ್ಬಂಧಕ್ಕೆ ಕರೆ ನೀಡಿದೆ. ಗಾಝಾಕ್ಕೆ ಮಾನವೀಯ ನೆರವು ತಲುಪಿಸಲು ಸಹಕಾರ ನೀಡುತ್ತಿದೆ. ಫೆಲೆಸ್ತೀನಿನ ನಿರಾಶ್ರಿತರಿಗೆ ನೆರವು ನೀಡುವ UNRWA ಸಂಸ್ಥೆಗೆ ಸಹ ಬೆಂಬಲ ನೀಡುತ್ತಿದೆ. ಇದಲ್ಲದೆ, ಆ ದೇಶದ ಪೌರತ್ವವಿಲ್ಲದ ಪೋಷಕರಿಗೆ ಜನಿಸಿದ ಮಕ್ಕಳಿಗೆ ಸ್ವಯಂಚಾಲಿತವಾಗಿ ರಾಷ್ಟ್ರೀಯತೆ ನೀಡುವ ನೀತಿಯೂ ಸ್ಪೇನ್ ನಲ್ಲಿ ಜಾರಿಯಲ್ಲಿದೆ. ಫೆಲೆಸ್ತೀನ್ ದೇಶದ ಪರವಾಗಿ ಸಾಂಕೇತಿಕ ನಿರ್ಣಯವನ್ನು ದಶಕಕ್ಕೂ ಹಿಂದೆ ಸ್ಪೇನ್ ನ ಎಲ್ಲಾ ರಾಜಕೀಯ ಪಕ್ಷಗಳು ಅಂಗೀಕರಿಸಿದ್ದವು.
ಇತಿಹಾಸದ ದೃಷ್ಟಿಯಿಂದಲೂ ಸ್ಪೇನ್ ವಿಭಿನ್ನವಾಗಿದೆ. ಪಶ್ಚಿಮ ಯುರೋಪಿನಲ್ಲಿ ಇಸ್ರೇಲ್ ನೊಂದಿಗೆ ಅಧಿಕೃತ ಸಂಬಂಧ ಸ್ಥಾಪಿಸಿದ ಕೊನೆಯ ದೇಶವಾಗಿತ್ತು ಸ್ಪೇನ್. 1986ರಲ್ಲಿ ಅದು ಈ ರಾಜತಾಂತ್ರಿಕ ನಡೆಗೆ ಮುಂದಡಿಯಿಟ್ಟಿತ್ತು.

Leave a Reply

Your email address will not be published. Required fields are marked *

error: Content is protected !!