ಉದಯವಾಹಿನಿ, ಆಂಧ್ರಪ್ರದೇಶ: ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ನಕಲಿ ತುಪ್ಪ ಬಳಕೆಯ ವಿಚಾರ ಕಳೆದ ವರ್ಷದಿಂದ ತೀವ್ರ ಚರ್ಚೆಯಲ್ಲಿದೆ. ಈ ಕುರಿತು ಇದೀಗ ತಿರುಪತಿ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಬಾಲಾಜಿ ಭಕ್ತರಿಗೆ ಬಹುದೊಡ್ಡ ಆಘಾತ ನೀಡಿದೆ. ತಿರುಪತಿ ದೇವಸ್ಥಾನದಲ್ಲಿ ಕಲಬೆರಕೆ ತುಪ್ಪವನ್ನು ಬಳಸಿ ಸುಮಾರು 20 ಕೋಟಿಗೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗಿದೆ. ಕಳೆದ ವರ್ಷ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ನಕಲಿ ತುಪ್ಪ ಬಳಕೆಯ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ. ಈ ನಡುವೆ ಇದೀಗ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅವರು 2019- 2024ರ ಅವಧಿಯಲ್ಲಿ ಒಟ್ಟು 48.76 ಕೋಟಿ ಲಡ್ಡುಗಳನ್ನು ವಿತರಿಸಲಾಗಿದೆ. ಇದನ್ನು ನಕಲಿ ತುಪ್ಪದಿಂದ ತಯಾರಿಸಲಾಗಿದೆ. ದೇವಾಲಯಕ್ಕೆ ಪ್ರತಿ ನಿತ್ಯ ಬರುವ ಭಕ್ತರು, ಪ್ರಸಾದ ಖರೀದಿ ವಿವರಗಳು ಮತ್ತು ಉತ್ಪಾದನೆ, ಮಾರಾಟದ ಅಂಕಿಅಂಶಗಳನ್ನು ಆಧರಿಸಿ ಈ ಲೆಕ್ಕಾಚಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ತನಿಖಾ ದಳದ ನೇತೃತ್ವದ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ತಿರುಪತಿಯಲ್ಲಿ ಕಳೆದ ವರ್ಷ ಬೆಳಕಿಗೆ ಬಂದಿರುವ ಕಲಬೆರಕೆ ಪ್ರಕರಣ ಪ್ರಸಾದದ ಪಾವಿತ್ರ್ಯವನ್ನು ಗಮನದಲ್ಲಿಟ್ಟುಕೊಂಡು ಖರೀದಿ ಮಾಡುವ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಸುಮಾರು 250 ಕೋಟಿ ರೂ. ಮೌಲ್ಯದ ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ವಿಷಕಾರಿ ಪದಾರ್ಥಗಳನ್ನು ಬಳಸಿದ 68 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಕೆಲವು ಕಂಪೆನಿಗಳು ಪೂರೈಸಿವೆ ಎಂದು ಎಸ್ ಐಟಿ ಹೇಳಿದೆ.
