ಉದಯವಾಹಿನಿ, ಬೆಲೆಮ್ : ಬ್ರೆಜಿಲ್ ಅಧ್ಯಕ್ಷತೆಯಲ್ಲಿ ನಡೆದ COP30 ಶೃಂಗಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಹವಾಮಾನ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಹಲವಾರು ನಿರ್ಧಾರಗಳನ್ನೂ ಸ್ವಾಗತಿಸಿದೆ. ಆದರೆ, ಹವಾಮಾನ ಬದಲಾವಣೆ ತಡೆಗಟ್ಟುವ ನೀತಿಯನ್ನು ರೂಪಿಸುವಲ್ಲಿ COP30 ಸಂಪೂರ್ಣ ಯಶಸ್ಸು ಕಂಡಿದೆ ಎಂದು ನಿರ್ದಿಷ್ಟವಾಗಿ ಹೇಳಿಲ್ಲ.
ಪಳೆಯುಳಿಕೆ ಇಂಧನ ಕೊನೆಗೊಳಿಸುವ ಅಂಶವಿಲ್ಲ: ಶನಿವಾರ ಇಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಚೌಕಟ್ಟು ಸಮಾವೇಶ (UNFCCC) ಸಮಾರೋಪ ಸಭೆಯಲ್ಲಿ ಅಧಿಕೃತ ಘೋಷಣೆಗಳಿಗೆ ಭಾರತ ಬೆಂಬಲಿಸುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ. ವಿಶ್ವಸಂಸ್ಥೆಯ ಹವಾಮಾನ ಕುರಿತ ಮಾತುಕತೆಗಳು, ವೈಪರೀತ್ಯಕ್ಕೆ ತುತ್ತಾಗುವ ದೇಶಗಳಿಗೆ ಹೆಚ್ಚಿನ ಹಣಕಾಸಿನ ನೆರವು ನೀಡುವ ಪ್ರತಿಜ್ಞೆಯೊಂದಿಗೆ ಕೊನೆಗೊಂಡಿತು. ಆದರೆ, ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ತೆಗೆದುಹಾಕುವ ಮಹತ್ವದ ವಿಚಾರ ಹವಾಮಾನ ಪ್ರತಿಜ್ಞೆಯಲ್ಲಿ ಕಂಡುಬಂದಿಲ್ಲ.ಹವಾಮಾನ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ನಿಯೋಗಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರು ನೇತೃತ್ವ ವಹಿಸಿದ್ದರು.ಜಾಗತಿಕ ಹೊಂದಾಣಿಕೆಯ ಗುರಿ (ಜಿಜಿಎ) ಅಡಿಯಲ್ಲಿ ಪ್ರಗತಿಯನ್ನು ಸ್ವಾಗತಿಸುತ್ತಾ, ಭಾರತವು ನಿರ್ಧಾರದ ಸಮಾನತೆಯ ಆಯಾಮ ಹೊಂದಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೊಂದಾಣಿಕೆಯ ಅಗತ್ಯ ಗುರುತಿಸುವುದನ್ನು ಪ್ರತಿಬಿಂಬಿಸುತ್ತದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಹವಾಮಾನ ಹಣಕಾಸು ಒದಗಿಸಲು ಅಭಿವೃದ್ಧಿ ಹೊಂದಿದ ದೇಶಗಳ ದೀರ್ಘಕಾಲೀನ ಬಾಧ್ಯತೆಗಳ ಮೇಲೆ ಒತ್ತು ನೀಡುವುದು ಭಾರತದ ಭಾಷಣದ ಪ್ರಮುಖ ಅಂಶವಾಗಿತ್ತು. ಪ್ಯಾರಿಸ್ ಒಪ್ಪಂದದ 9.1ನೇ ವಿಧಿಯ ಮೇಲೆ ದೀರ್ಘಕಾಲೀನ ಗಮನ ಹರಿಸುವತ್ತ ಅಧ್ಯಕ್ಷರು ತೆಗೆದುಕೊಂಡ ಪ್ರಯತ್ನಗಳಿಗೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿತು. 33 ವರ್ಷಗಳ ಹಿಂದೆ ರಿಯೊದಲ್ಲಿ ನೀಡಿದ ಭರವಸೆಗಳು ಬೆಲೆಮ್‌ನಲ್ಲಿ ತೆಗೆದುಕೊಂಡ ನಿರ್ಧಾರಗಳಿಂದಾಗಿ ಈಡೇರಲಿವೆ ಎಂದು ಭಾರತವು ಪ್ರಾಮಾಣಿಕವಾಗಿ ಆಶಿಸುತ್ತಿದೆ ಎಂದು ಅದು ಹೇಳಿದೆ.

 

Leave a Reply

Your email address will not be published. Required fields are marked *

error: Content is protected !!