ಉದಯವಾಹಿನಿ, ಕೌಲಾಲಂಪುರ: ಮುಂದಿನ ವರ್ಷದಿಂದ 16 ವರ್ಷದೊಳಗಿನ ವಯೋಮಾನದವರಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ವಿಧಿಸುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಮಲೇಷ್ಯಾ ಸರ್ಕಾರ ತಿಳಿಸಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಾಮಾಜಿಕ ಜಾಲತಾಣ ನಿರ್ಬಂಧಕ್ಕೆ ಮುಂದಾಗಿದ್ದು, 16 ವರ್ಷದೊಳಗಿನ ವಯೋಮಾನದವರಿಗೆ ಜಾಲತಾಣಗಳ ಖಾತೆಗಳಿಗೆ ಸೈನ್ ಇನ್ ಮಾಡುವುದನ್ನು ನಿರ್ಬಂಧಿಸಲಾಗುವುದು ಎಂದು ಮಲೇಷ್ಯಾದ ಸಂವಹನ ಸಚಿವ ಫಾಹ್ಮ ಫಡ್ಡಿಲ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಬಳಕೆಗೆ ವಯಸ್ಸಿನ ನಿರ್ಬಂಧ ವಿಧಿಸುವ ಕುರಿತಾದ ಮಲೇಷ್ಯಾ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳು ಸಹಕಾರ ನೀಡುತ್ತವೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.ಸರ್ಕಾರದ ನಿರ್ಧಾರಕ್ಕೆ ಪೋಷಕರು ಕೂಡ ಸಹಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಮಲೇಷ್ಯಾದಲ್ಲಿ ಅಂತರ್ಜಾಲವು ವೇಗದ ಜೊತೆಗೆ, ಸುರಕ್ಷತೆಯನ್ನು ಕೂಡ ಹೊಂದಿರಲಿದೆ. ಅದಲ್ಲೂ ಮಕ್ಕಳು ಮತ್ತು ಕುಟುಂಬಗಳ ಮಾಹಿತಿಯ ಗೌಪತ್ಯೆಗೆ ಒತ್ತು ನೀಡುತ್ತೇವೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಬಳಕೆಗೆ ವಯಸ್ಸಿನ ನಿರ್ಬಂಧ ವಿಧಿಸುವ ಸರ್ಕಾರದ ನಿರ್ಧಾರಕ್ಕೆ ಸಂಸದರು ಹಾಗೂ ಶೇ 72ರಷ್ಟು ಜನರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಮಲೇಷ್ಯಾ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೇಶದಲ್ಲಿ 80 ಲಕ್ಷ ಬಳಕೆದಾರರಿಗಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮಗಳು ಸರ್ಕಾರದಿಂದ ಪರವಾನಗಿ ಪಡೆಯಬೇಕು ಎಂದು ನಿಯಮ ಜಾರಿಗೊಳಿಸಿದೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೆದರ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಗೆ ವಯಸ್ಸಿನ ನಿರ್ಬಂಧವಿದೆ.

Leave a Reply

Your email address will not be published. Required fields are marked *

error: Content is protected !!