ಉದಯವಾಹಿನಿ, ನವದೆಹಲಿ: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಇನ್ನು ಮುಂದೆ ಆಧಾರ್ ಕಾರ್ಡ್‌ಗಳನ್ನು ಜನನ ಪ್ರಮಾಣ ಪತ್ರವಾಗಿ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸುವುದಿಲ್ಲ ಎಂದು ಘೋಷಿಸಿವೆ. ಈ ಎರಡೂ ರಾಜ್ಯ ಸರ್ಕಾರಗಳು ಆಧಾರ್ ಅನ್ನು ಅಧಿಕೃತ ಜನನ ದಾಖಲೆಯಾಗಿ ಪರಿಗಣಿಸುವುದನ್ನು ನಿಲ್ಲಿಸುವಂತೆ ಇಲಾಖೆಗಳಿಗೆ ಅಧಿಕೃತ ಆದೇಶ ಹೊರಡಿಸಿವೆ.ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023 ರ ನಂತರ ಆಧಾರ್ ಅನ್ನು ಏಕೈಕ ಪುರಾವೆಯಾಗಿ ಬಳಸಿಕೊಂಡು ಮಾಡಲಾದ ಎಲ್ಲಾ ಜನನ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ವರದಿಯಾಗಿದೆ. ಆಧಾರ್ ಆಸ್ಪತ್ರೆ ಅಥವಾ ಜನನದ ಸರ್ಕಾರಿ ದಾಖಲೆಯಲ್ಲ. ಇದು ಮೂಲಭೂತ ಗುರುತಿನ ವಿವರಗಳನ್ನು ಮಾತ್ರ ತೋರಿಸುತ್ತದೆ. ಆದ್ದರಿಂದ ಜನನದ ಕಾನೂನು ಪುರಾವೆಯಾಗಿ ಬಳಸದಿರಲು ನಿರ್ಧರಿಸಲಾಗಿದೆ.
ಆಧಾರ್ ಅನ್ನು ಮಾತ್ರ ಬಳಸಿಕೊಂಡು ಜನನ ಪ್ರಮಾಣಪತ್ರಗಳನ್ನು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಗಳು ಎಚ್ಚರಿಕೆ ನೀಡಿದೆ.
