ಉದಯವಾಹಿನಿ, ಮಧ್ಯ ಇಂಗ್ಲೆಂಡ್‌ನ ವೋರ್ಸೆಸ್ಟರ್‌ನಲ್ಲಿ ಇರಿತಕ್ಕೊಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾರ್ಬೋರ್ನ್ ರಸ್ತೆಯಲ್ಲಿ 30 ವರ್ಷದ ವಿಜಯ್ ಕುಮಾರ್ ಶಿಯೋರನ್ ತೀವ್ರ ಗಾಯಗಳೊಂದಿಗೆ ಪತ್ತೆಯಾಗಿದ್ದರು. ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾದರು.
ಶಂಕಿತ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಂತೆ ಅವರೆಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆರಂಭದಲ್ಲಿ ಬಂಧಿಸಲ್ಪಟ್ಟಿದ್ದ 6ನೇ ವ್ಯಕ್ತಿ ಆರೋಪಮುಕ್ತಗೊಂಡಿದ್ದಾನೆ. ಪತ್ತೇದಾರಿ ಮುಖ್ಯ ಇನ್ಸ್‌ಪೆಕ್ಟರ್ ಲೀ ಹೋಲ್‌ಹೌಸ್ ಮೃತಪಟ್ಟ ಯುವಕನ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಈ ಸಂಬಂಧ ಮತ್ತಷ್ಟು ತನಿಖೆ ನಡೆಯುತ್ತಿದೆ.ಕೊಲೆಯಾದ ವಿಜಯ್ ಕುಮಾರ್ ಶಿಯೋರನ್, ಹರಿಯಾಣದ ಚಾರ್ಕಿ ದಾದ್ರಿ ಜಿಲ್ಲೆಯ ಜಗ್ರಾಂಬಸ್ ಗ್ರಾಮದವರು. ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಈ ವರ್ಷದ ಆರಂಭದಲ್ಲಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅವರು ಇಂಗ್ಲೆಂಡ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು ಆ ಹುದ್ದೆಯನ್ನು ತೊರೆದಿದ್ದರು.ಶಿಯೋರನ್ ಬ್ರಿಸ್ಟಲ್‌ನಲ್ಲಿರುವ ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯದಲ್ಲಿ (UWE) ವ್ಯಾಸಂಗ ಮಾಡುತ್ತಿದ್ದರು. ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜತಾಂತ್ರಿಕ ಹಸ್ತಕ್ಷೇಪವನ್ನು ಮೃತನ ಸಹೋದರ ಕೋರಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ, ರವಿ ಕುಮಾರ್ ತಮ್ಮ ಸಹೋದರನ ದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಈ ದುರದೃಷ್ಟಕರ ಘಟನೆಯಿಂದ ಕುಟುಂಬವು ದಿಗ್ಭ್ರಮೆಗೊಂಡಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
