ಉದಯವಾಹಿನಿ, ವಿಶ್ವಸಂಸ್ಥೆ : ಇಸ್ರೇಲ್, ಅಲ್ವೇನಿಯಾ, ಅರ್ಜೆಂಟೀನಾ ಮತ್ತು ಬಕ್ರೇನ್ ಕುರಿತ ತನ್ನ ಇತ್ತೀಚಿನ ವರದಿಯನ್ನು `ಚಿತ್ರಹಿಂಸೆಯ ವಿರುದ್ಧದ ವಿಶ್ವಸಂಸ್ಥೆ ಸಮಿತಿ ‘ ಬಿಡುಗಡೆಗೊಳಿಸಿದ್ದು ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಅಥವಾ ಅವಮಾನಕರ ವಿಧಾನಗಳ ವಿರುದ್ಧದ ನಿರ್ಣಯಕ್ಕೆ ಪ್ರತೀ ದೇಶದ ಬದ್ಧತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಇಸ್ರೇಲ್ ನ ಕುರಿತ ವಿಸ್ತ್ರತ ಮೌಲ್ಯಮಾಪನದಲ್ಲಿ ಸಮಿತಿಯು ಗಂಭೀರ ಕಳವಳಕ್ಕೆ ಕಾರಣವಾದ ಹಲವು ಕ್ಷೇತ್ರಗಳನ್ನು, ವಿಶೇಷವಾಗಿ 2023ರ ಅಕ್ಟೋಬರ್ 7ರ ಬಳಿಕದ ಬೆಳವಣಿಗೆಯ ಬಗ್ಗೆ ವಿವರಿಸಿದೆ. ಸಮಿತಿಯು ಅಕ್ಟೋಬರ್ 7ರ ದಾಳಿಯನ್ನು ಖಂಡಿಸಿದೆ, ಆದರೆ ಇಸ್ರೇಲ್ ನ ಪ್ರತಿಕ್ರಿಯೆ ಅಸಮಾನವಾಗಿದೆ ಎಂದು ಟೀಕಿಸಿದೆ. ಹಮಾಸ್ ಮತ್ತು ಅದರೊಂದಿಗೆ ಗುರುತಿಸಿರುವ ಗುಂಪುಗಳು ಇಸ್ರೇಲ್ ವಿರುದ್ಧ ನಡೆಸಿದ ಆಕ್ರಮಣವನ್ನು ಸಮಿತಿ ಸ್ಪಷ್ಟವಾಗಿ ಖಂಡಿಸಿದ್ದು, ದಾಳಿಯಿಂದ ಉಂಟಾಗಿರುವ ಪ್ರಾಣಹಾನಿ, ದೈಹಿಕ ಮತ್ತು ಭಾವನಾತ್ಮಕ ಗಾಯಗಳಿಗೆ ಸಂತಾಪ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನ ಪ್ರತಿಕ್ರಿಯೆಯ ಅಸಮಂಜಸ ಸ್ವರೂಪದ ಬಗ್ಗೆ, ವ್ಯಾಪಕ ಸಾವು-ನೋವಿನ ಬಗ್ಗೆ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. * ಇಸ್ರೇಲ್ ನ ಬಂಧನ ಕೇಂದ್ರಗಳಲ್ಲಿನ ಕಳಪೆ ಪರಿಸ್ಥಿತಿಯ ಬಗ್ಗೆ ವರದಿ ಬೊಟ್ಟು ಮಾಡಿದೆ. ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವರು ಮತ್ತು ಇತರ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಇದು ಸಾಮೂಹಿಕ ಶಿಕ್ಷೆಯ ಉದ್ದೇಶಪೂರ್ವಕ ರಾಷ್ಟ್ರನೀತಿಯ ಪರಿಣಾಮವಾಗಿದೆ ಎಂದು ಹೇಳಿದೆ. ವ್ಯವಸ್ಥಿತ, ವ್ಯಾಪಕ ಚಿತ್ರಹಿಂಸೆಯ ವರದಿಯ ಬಗ್ಗೆ ಸಮಿತಿ ಎಚ್ಚರಿಕೆ ವ್ಯಕ್ತಪಡಿಸಿದೆ.
* ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ ನ ಕಾನೂನುಬಾಹಿರ ಉಪಸ್ಥಿತಿ ಮುಂದುವರಿದಿರುವ ಸಮಯದಲ್ಲಿ ಪರಿಚಯಿಸಲಾದ ಹಲವಾರು ನೀತಿಗಳು ಫೆಲೆಸ್ತೀನೀಯರಿಗೆ ಕ್ರೂರ, ಅಮಾನವೀಯ ಅಥವಾ ಅವಮಾನಕರ ಜೀವನ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.
