ಉದಯವಾಹಿನಿ, ಪ್ರತ್ಯೇಕ ಸಿಂಧೂ ದೇಶಕ್ಕಾಗಿ 1947ರಲ್ಲಿ ಪಾಕಿಸ್ತಾನ ರಚನೆ ಆದಾಗಲೇ ಬೇಡಿಕೆ ಮಂಡಿಸಲಾಗಿತ್ತು. 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ಆದ ನಂತರವೂ ಪ್ರತ್ಯೇಕತೆಯ ಬೇಡಿಕೆ ಬಲವಾಗುತ್ತಲೇ ಸಾಗಿತು. ಸಿಂಧಿ ಮಾತನಾಡುವ ಜನ ಸಿಂಧೂ ದೇಶಕ್ಕಾಗಿ ಒತ್ತಾಯಿಸುತ್ತಲೇ ಬಂದರು. ಆದ್ರೆ ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ʻಗಡಿಗಳು ಬದಲಾಗಬಹುದು, ಸಿಂಧ್ ಭಾರತಕ್ಕೆ ಮರಳಬಹುದು’ ಎಂದು ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ರಲ್ಲೂ ಮುಖ್ಯವಾಗಿ ಭಾರತ-ಪಾಕಿಸ್ತಾನದ ನಡುವೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಿರೀಕ್ಷೆಯಂತೆಯೇ ಪಾಕಿಸ್ತಾನ ಇದನ್ನು ʻಪ್ರಚೋದನಕಾರಿ’ ಎಂದು ಖಂಡಿಸಿದ್ರೆ, ಭಾರತದಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿದೆ.
ರಾಜನಾಥ್ ಸಿಂಗ್ ಅವರ ಹೇಳಿಕೆ ಬಳಿಕ ಜಗತ್ತಿನಾದ್ಯಂತ ಹರಡಿರುವ ಸಿಂಧಿ ಜನ ಇದೀಗ ಸಿಂಧ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಿಂಧೂ ದೇಶದ ನಿರ್ಮಾಣಕ್ಕಾಗಿ ಭಾರತವೂ ಸೇರಿದಂತೆ ವಿಶ್ವದ ಇತರ ದೇಶಗಳ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಇದು ಕೇವಲ ಸಚಿವರೊಬ್ಬರ ಹೇಳಿಕೆಯಾಗಿರದೇ ವಿಭಜನೆಯಿಂದ ನೋವುಂಡು, ಇಂದಿಗೂ ಪ್ರತ್ಯೇಕ ನೆಲೆಗಾಗಿ ಹೋರಾಡುತ್ತಿರುವ ಸಿಂಧಿ ಸಮುದಾಯದ ಭಾವನೆಗಳು ಮತ್ತು ಭಾರತದ ಪ್ರಾಚೀನ ನಾಗರಿಕತೆಯ ಸ್ಮರಣೆಯಾಗಿಯೂ ಮಾರ್ಪಟ್ಟಿದೆ.
ಸಾವಿರಾರು ವರ್ಷಗಳ ಹಿಂದೆ…
ಸಿಂಧ್ ಪ್ರಾಂತ್ಯವು ಪಾಕಿಸ್ತಾನದ ಒಂದು ಭಾಗವಾಗುವ ಅದೆಷ್ಟೋ ಶತಮಾನಗಳಿಗೂ ಮೊದಲು, ಉಪಖಂಡದ ಸಂಸ್ಕೃತಿಯ ತಳಹದಿಯಾಗಿತ್ತು. ಮೊಹೆಂಜೊದಾರೊ ಮತ್ತು ಹರಪ್ಪಾದಂತಹ ಸಿಂಧೂ ಕಣಿವೆ ನಾಗರಿಕತೆಯ ಕುರುಹುಗಳು ಇದೇ ನೆಲದಲ್ಲಿವೆ. ಸಾವಿರಾರು ವರ್ಷಗಳಿಂದ ಈ ಪ್ರದೇಶವನ್ನು ‘ಸಿಂಧೂ ದೇಶ’ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಹರಿಯುವ ಸಿಂಧೂ ನದಿಯು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಪವಿತ್ರ ಸ್ಥಾನ ಪಡೆದಿದೆ. ರಾಜನಾಥ್ ಸಿಂಗ್ ಅವರು ತಮ್ಮ ಭಾಷಣದಲ್ಲಿ, ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನ ಸ್ಮರಿಸುವ ಮೂಲಕ, ಸಿಂಗ್ ಅವರು ಕೇವಲ ಭೂಪ್ರದೇಶದ ಬಗ್ಗೆ ಮಾತನಾಡದೇ, ಹಂಚಿಹೋದ ನಾಗರಿಕತೆಯ ಪ್ರಜ್ಞೆಯನ್ನ ಎತ್ತಿ ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ, ರವೀಂದ್ರನಾಥ ಠಾಗೋರರು ರಚಿಸಿದ ನಮ್ಮ ರಾಷ್ಟ್ರಗೀತೆಯಲ್ಲೂ ʻಪಂಜಾಬ ಸಿಂಧು ಗುಜರಾತ ಮರಾಠ…ʼ ಎಂಬ ಸಾಲುಗಳಿದ್ದು, ಸಿಂಧ್ ಇಂದಿಗೂ ಭಾರತದ ಸಾಂಸ್ಕೃತಿಕ ಭೂಗೋಳದ ಅವಿಭಾಜ್ಯ ಅಂಗ ಎಂಬುದನ್ನು ನೆನಪಿಸಿದ್ದರು.
