ಉದಯವಾಹಿನಿ,  ಭಾರತ ನಡೆಸಿದ ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವಕ್ಕೆ ಕೆಲವು ದಿನಗಳ ಮುನ್ನ, ಪಾಕಿಸ್ತಾನ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಈ ನಾಯಕ ನೀಡಿದ ಹೇಳಿಕೆ ಭಯೋತ್ಪಾದಕ ಗುಂಪುಗಳೊಂದಿಗಿನ ಪಾಕಿಸ್ತಾನದ ಸಂಬಂಧಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನ ನಾಯಕ ಶಾಹಿರ್ ಸಿಯಾಲ್ವಿ, ಭಾರತ ಕಳೆದ ವರ್ಷ ಉಗ್ರರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಪಾಕಿಸ್ತಾನ ಸೇನೆ ಉಗ್ರರಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ ನಂತಹ ಘೋಷಿತ ಭಯೋತ್ಪಾದಕರ ಪರ ಹೋರಾಟ ನಡೆಸಿದೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಈ ಹೇಳಿಕೆಗಳು ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಇರುವ ಸಂಬಂಧಗಳ ಬಗ್ಗೆ ಮತ್ತೆ ಪ್ರಶ್ನೆ ಏಳುವಂತೆ ಮಾಡಿವೆ. ಪಾಕಿಸ್ತಾನ ನಾಯಕ ಶಾಹಿರ್ ಸಿಯಾಲ್ವಿ ಲಷ್ಕರ್-ಎ-ತೈಬಾ ಸಂಬಂಧಿತ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಸೇನೆ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ಗಾಗಿ ಹೋರಾಡಿದೆ ಎಂಬುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಲಷ್ಕರ್-ಎ-ತೈಬಾ ಸ್ಥಾಪಕ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ವಿಶ್ವಸಂಸ್ಥೆಯಿಂದ ಭಯೋತ್ಪಾದಕರೆಂದು ಘೋಷಿಸಲ್ಪಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮುಜಮ್ಮಿಲ್ ಇಕ್ಬಾಲ್ ಹಶ್ಮಿ ಕೂಡ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಮುರಿಡ್ಕೆ ಮತ್ತು ಬಹಾವಲ್ಪುರದ ಮೇಲೆ ಭಾರತ ದಾಳಿ ನಡೆಸಿತು ಎಂದು ಸಿಯಾಲ್ವಿ ಹೇಳಿದ್ದಾನೆ. ಈ ದಾಳಿಯಲ್ಲಿ ಹಲವು ಭಯೋತ್ಪಾದಕರು ಮೃತಪಟ್ಟರು. ದಾಳಿಯ ನಂತರ ಪಾಕಿಸ್ತಾನವು ಸತ್ತವರು ಭಯೋತ್ಪಾದಕರ ಬದಲು ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲು ಯತ್ನಿಸಿತ್ತು ಎಂದು ತಿಳಿಸಿದ್ದಾನೆ.

ವರದಿಯಾದ ಹೇಳಿಕೆಗಳ ಪ್ರಕಾರ, ಹತ್ಯೆಯಾದವರ ಅಂತ್ಯಕ್ರಿಯೆಗಳನ್ನು ಧರ್ಮಗುರುಗಳಲ್ಲ, ಬದಲಾಗಿ ಪಾಕಿಸ್ತಾನ ಸೇನೆಯ ಅಧಿಕಾರಿಗಳು ನಡೆಸಿದ್ದರು. ಸಮವಸ್ತ್ರ ಧರಿಸಿದ ಸಿಬ್ಬಂದಿ ಶವಗಳನ್ನು ಹೊತ್ತೊಯ್ದರು ಎಂದು ಸಿಯಾಲ್ವಿ ಹೇಳಿಕೊಂಡಿದ್ದಾನೆ. ಮೃತರು ಭಯೋತ್ಪಾದಕರಲ್ಲ, ಬದಲಾಗಿ ಹೋರಾಟಗಾರರು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಕೇತಿಸುವ ಪ್ರಯತ್ನ ಎಂದು ಅವರು ವಿವರಿಸಿದ್ದಾನೆ. ಈ ಹೇಳಿಕೆಯು ಪಾಕಿಸ್ತಾನದ ಮಿಲಿಟರಿ ಸ್ಥಾಪನೆಯು ತನ್ನ ದೇಶದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತದೆ ಎಂಬ ಭಾರತದ ದೀರ್ಘಕಾಲದ ಆರೋಪವನ್ನು ಇನ್ನಷ್ಟು ಬಲಪಡಿಸಿದೆ.

Leave a Reply

Your email address will not be published. Required fields are marked *

error: Content is protected !!