ಉದಯವಾಹಿನಿ, ವಾಷಿಂಗ್ಟನ್ : ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಒ ಹಾಗೂ ಬ್ಯುಸಿನಸ್ ಲೋಕದ ಟೈಕೂನ್, ಬಿಲಿಯನೇರ್ ಎಲಾನ್ ಮಸ್ಕ್ ಸದಾ ಒಂದಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಮಸ್ಕ್ ತಮಗೆ ಮತ್ತು ಭಾರತಕ್ಕಿರುವ ಸಂಬಂಧದ ಕುರಿತಾಗಿ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಸಂಗಾತಿ ಶಿವೋನ್ ಝಿಲಿಸ್ ಅರೆ ಭಾರತೀಯರಾಗಿದ್ದು, ಪುತ್ರನ ಮಧ್ಯದ ಹೆಸರು ಶೇಖರ್ ಎಂದು ಹೇಳಿದ್ದಾರೆ. ಈ ಮೂಲಕ ತಮಗೆ ಭಾರತದೊಂದಿಗೆ ನಂಟಿದೆ ಎಂದು ಹೇಳಿಕೊಂಡಿದ್ದಾರೆ. ಯುವ ಉದ್ಯಮಿ ನಿಖಿಲ್ ಕಾಮತ್ ಜತೆಗಿನ ಪಾಡ್ ಕಾಸ್ಟ್ ಪೀಪಲ್ ಬಯ ಡಬ್ಲ್ಯು.ಟಿ.ಎಫ್.ನಲ್ಲಿ ಭಾಗವಹಿಸಿದ್ದ ಮಸ್ಕ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ, ಖಗೋಳ ಭೌತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಹೆಸರಿನಿಂದ ಶೇಖರ್ ಹೆಸರನ್ನು ತನ್ನ ಪುತ್ರನಿಗೆ ಮಧ್ಯದ ಹೆಸರಾಗಿ ಇಟ್ಟಿರುವುದಾಗಿ ಮಸ್ಕ್ ಹೇಳಿದ್ದಾರೆ.
ಭಾರತೀಯ-ಅಮೆರಿಕನ್ ಖಗೋಳ ಭೌತ ವಿಜ್ಞಾನಿ ಎಸ್. ಚಂದ್ರಶೇಖರ್ ಅವರಿಗೆ 1983ರಲ್ಲಿ ನಕ್ಷತ್ರಗಳ ಸಂರಚನೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಭೌತಶಾಸ್ತ್ರಕ್ಕಾಗಿರುವ ನೊಬೆಲ್ ಬಹುಮಾನವನ್ನು ನೀಡಲಾಗಿತ್ತು.ಝಿಲಿಸ್ ಭಾರತದಲ್ಲಿದ್ದರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಮಸ್ಕ್, ಮಗುವಾಗಿದ್ದಲೇ ಆಕೆಯನ್ನು ದತ್ತು ಪಡೆಯಲಾಗಿತ್ತು ಮತ್ತು ಆಕೆ ಕೆನಡಾದಲ್ಲೇ ಬೆಳೆದಳು. ಈ ಕುರಿತಾದ ಹೆಚ್ಚಿನ ವಿವರಗಳು ತನಗೆ ತಿಳಿದಿಲ್ಲ ಎಂದು ಮಸ್ಕ್ ಹೇಳಿಕೊಂಡಿದ್ದಾರೆ.ಮಸ್ಕ್ ಮತ್ತು ಝಿಲಿಸ್ ದಂಪತಿಗೆ ಒಟ್ಟು ನಾಲ್ಕು ಮಕ್ಕಳಿದ್ದಾರೆ, ಅವರಲ್ಲಿ ಸ್ಟ್ರೈಡರ್ ಮತ್ತು ಅಝುರೆ ಅವಳಿಗಳಾಗಿದ್ದರೆ, ಅರ್ಕಾಡಿಯಾ ಎಂಬ ಮಗಳು ಮತ್ತು ಸೆಲ್ಡನ್ ಲೈಕರ್ಗಸ್ ಎಂಬ ಪುತ್ರನಿದ್ದಾನೆ. ಮಸ್ಕ್ ಅವರ ನ್ಯೂರೋ ಲಿಂಕ್ ಕಂಪನಿಯ ಕಾರ್ಯನಿರ್ವಾಹಕ ಮತ್ತು ಸ್ಪೆಷಲ್ ಪ್ರಾಜೆಕ್ಟ್‌ನ ನಿರ್ದೇಶಕಿಯಾಗಿ ಝಿಲಿಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕದ ಅಭಿವೃದ್ಧಿಯಲ್ಲಿ ಪ್ರತಿಭಾವಂತ ಭಾರತೀಯರ ಕೊಡುಗೆ ಅಪಾರ ಎಂದು ಮಸ್ಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
