ಉದಯವಾಹಿನಿ, ಟೆಲ್ ಅವೀವ್ : ಭ್ರಷ್ಟಾಚಾರ ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕೆಂಬ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕೋರಿಕೆಯನ್ನು ಮಾನ್ಯ ಮಾಡಬಾರದು ಎಂದು ಆಗ್ರಹಿಸಿ ಅಧ್ಯಕ್ಷ ಇಸಾಕ್ ಹೆರ್ಜೋಗ್ ಅವರ ನಿವಾಸದ ಎದುರು ರವಿವಾರ ತಡರಾತ್ರಿ ಬೃಹತ್ ಪ್ರತಿಭಟನೆ ನಡೆದಿರುವುದಾಗಿ ವರದಿಯಾಗಿದೆ.
ದೀರ್ಘಾವಧಿಯಿಂದ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯಲ್ಲಿ ತನಗೆ ಕ್ಷಮಾದಾನ ನೀಡಬೇಕೆಂದು ರವಿವಾರ ನೆತನ್ಯಾಹು ಅಧ್ಯಕ್ಷರಿಗೆ ಅಧಿಕೃತ ಕೋರಿಕೆ ಸಲ್ಲಿಸಿದ್ದರು. ಆದರೆ ತಪ್ರೊಪ್ಪಿಕೊಳ್ಳದೆ ಮತ್ತು ಪಶ್ಚಾತ್ತಾಪ ವ್ಯಕ್ತಪಡಿಸದೆ ಕ್ಷಮಾದಾನ ಕೋರುವುದನ್ನು ವಿರೋಧಿಸಿ `ಕ್ಷಮೆ ಅಂದರೆ ಬನಾನಾ ರಿಪಬ್ಲಿಕ್ ಎಂಬ ಬ್ಯಾನರ್‌ನಡಿ ಪ್ರತಿಭಟನೆ ನಡೆಸಲಾಗಿದೆ. ಕೆಲವು ಪ್ರತಿಭಟನಾಕಾರರು ನೆತನ್ಯಾಹು ಅವರನ್ನು ಹೋಲುವ ಮುಖವಾಡ ಮತ್ತು ಜೈಲಿನ ಸಮವಸ್ತ್ರ ಧರಿಸಿದ್ದರೆ, ಇನ್ನು ಕೆಲವರು ಬಾಳೆಹಣ್ಣುಗಳ ರಾಶಿಯ ಹಿಂದೆ `ಕ್ಷಮೆ’ ಎಂಬ ಫಲಕ ಹಿಡಿದು ನಿಂತಿದ್ದರು.
ಅಧ್ಯಕ್ಷರ ಕೆಲಸ ಇಸ್ರೇಲ್‌ನ ಪ್ರಜಾಪ್ರಭುತ್ವವನ್ನು ರಕ್ಷಿಸುವುದು. ನೀವು ಕಾನೂನು ಮತ್ತು ಸುವ್ಯವಸ್ಥೆಯನ್ನು ನಾಶಗೊಳಿಸಿದರೆ, ಇದು ಇಸ್ರೇಲ್ ಪ್ರಜಾಪ್ರಭುತ್ವದ ಅಂತ್ಯವಾಗಲಿದೆ. ಯಾವುದೇ ಹೊಣೆಗಾರಿಕೆ ವಹಿಸದೆ, ದೇಶವನ್ನು ಹರಿದುಹಾಕಿದ್ದಕ್ಕೆ ಯಾವುದೇ ಬೆಲೆ ತೆರದೆ ತನ್ನ ವಿರುದ್ಧದ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಅವರು ಕೇಳುತ್ತಿದ್ದಾರೆ. ನೆತನ್ಯಾಹು ಅವರ ಉದ್ದೇಶ ಮತ್ತು ಅದರಿಂದ ನಮ್ಮ ದೇಶದ ಭವಿಷ್ಯದ ಮೇಲಾಗುವ ಪರಿಣಾಮಗಳನ್ನು ಇಸ್ರೇಲ್‌ನ ಜನತೆ ತಿಳಿದುಕೊಂಡಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
