ಉದಯವಾಹಿನಿ, ಪಾಟ್ನಾ : ಮದುವೆ ಸಂದರ್ಭದಲ್ಲಿ ವಧು-ವರರ ಕುಟುಂಬದ ನಡುವೆ ಸಣ್ಣ ಪುಟ್ಟ ಕಾರಣಕ್ಕೆಲ್ಲ ವೈಮನಸ್ಸು ಮೂಡುವುದು ಸಹಜ. ವರನ ಕಡೆಯವರಿಗೆ ಸರಿಯಾಗಿ ಉಪಚಾರ ಮಾಡಿಲ್ಲ, ವಧುವಿಗೆ ಸೀರೆ ಚಿನ್ನ ಉತ್ತಮ ಗುಣಮಟ್ಟದ್ದು ನೀಡಿಲ್ಲ, ಮದುವೆಗೆ ತಾವು ಹೇಳಿದ ಆಹಾರ ಖಾದ್ಯ ತಯಾರಿಸಿಲ್ಲ ಹೀಗೆ ಅನೇಕ ಕಾರಣಕ್ಕೆ ಜಗಳ ನಡೆದಿರುವ ಅದೆಷ್ಟೋ ಉದಾಹರಣೆ ನೋಡಿದ್ದೇವೆ. ಆದರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ರಸಗುಲ್ಲ ಕಡಿಮೆಯಾಗಿದೆ ಎಂಬ ಕಾರಣಕ್ಕೆ 2 ಕುಟುಂಬದವರ ನಡುವೆ ದೊಡ್ಡ ಕಲಹವೇ ಏರ್ಪಟ್ಟ ಘಟನೆ ಬಿಹಾರದ ಬೋಧ್ ಗಯಾದಲ್ಲಿ ನಡೆದಿದೆ. ಕೊನೆಗೆ ಮದುವೆಯೇ ರದ್ದಾಗಿದೆ. ರಸಗುಲ್ಲಕ್ಕಾಗಿ ಅತಿಥಿಗಳು ಮದುವೆ ಸಮಾರಂಭ ಎಂಬುದನ್ನು ಮರೆತು ಪರಸ್ಪರ ಕಿತ್ತಾಟ ನಡೆಸುತ್ತಿದ್ದು, ಸದ್ಯ ಈ ಘಟನೆಯ ವಿಡಿಯೊ ವೈರಲ್ (Viral Video) ಆಗಿದೆ.

ಈ ಮದುವೆ ಸಮಾರಂಭದಲ್ಲಿ ವಧು ಮತ್ತು ವರನ ಕಡೆಯ ಕುಟುಂಬದವರು ಮತ್ತು ಅತಿಥಿಗಳು ಪರಸ್ಪರ ಗುದ್ದಾಡುವುದು, ತಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಇನ್ನೂ ಕೆಲವರು ಕೆಂಪು ಪ್ಲಾಸ್ಟಿಕ್ ಕುರ್ಚಿಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹೊಡೆಯಲು ಮುಂದಾಗುವುದು, ಇತರ ಸಣ್ಣ ಪುಟ್ಟ ವಸ್ತುಗಳನ್ನು ಬಳಸಿ ಪರಸ್ಪರ ಕಿತ್ತಾಡುವುದನ್ನು ದೃಶ್ಯದಲ್ಲಿ ಕಾಣಬಹುದು. ರಸಗುಲ್ಲ ಕೊರತೆಯಿಂದಾಗಿ ಮದುವೆ ರದ್ದಾದ ನಂತರ ವಧುವಿನ ಕುಟುಂಬದವರು ವರನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!