ಉದಯವಾಹಿನಿ, ಮುಂಬೈ: ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಅಡಚಣೆ ಉಂಟಾಗಿದೆ. ಈ ವೇಳೆ ವಿಮಾನಕ್ಕಾಗಿ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲಿ ಕಾದು ಹತಾಶರಾಗಿದ್ದಾರೆ. ಇನ್ನೂ ಕೆಲವರು ನಿಲ್ದಾಣದಲ್ಲೇ ಕಣ್ಣೀರಾಕಿದ್ದು, ಕೆಲವು ಕಡೆ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಘರ್ಷಣೆಗಳಾಗಿವೆ ಎನ್ನಲಾಗಿದೆ. ಈ ನಡುವೆ ವಿಮಾನಯಾನ ಸಂಸ್ಥೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಗಂಟೆಗಟ್ಟಲೆ ವಿಮಾನಕ್ಕಾಗಿ ಕಾಯ್ದ ಬಳಿಕ ವಿಮಾನ ವಿಳಂಬದ ಕುರಿತು ಮಾಹಿತಿ ಪಡೆಯಲು ವಿಮಾನ ಸಂಸ್ಥೆಯ ಕೌಂಟರ್‌ಗಳ ಮೆಲೆ ಕೂಗುತ್ತಾ ಜೋರು ಗಲಾಟೆ ಮಾಡಿರುವುದರಿಂದ ನಿಲ್ದಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ವೇಳೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಂಡಿಗೋ ಸಿಬ್ಬಂದಿ ಹೇಳಿದರೂ, ಪ್ರಯಾಣಿಕರು ಕೋಪ ತಾಳದೆ ವಿಮಾನಯಾನ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಂಡಿಗೋ ವಿಮಾನ ರದ್ದತಿಯಿಂದ ವಿಮಾನ ನಿಲ್ದಾಣದಲ್ಲಿ ಉಂಟಾಗಿದ್ದ ಅವ್ಯವಸ್ಥೆಯ ನಡುವೆ ಸರ್ಕಾರ ಮಧ್ಯಪ್ರವೇಶಿಸಿ ಇತ್ತೀಚಿಗೆ ಜಾರಿ ಮಾಡಲಾಗಿದ್ದ ವಿಮಾನ ಕರ್ತವ್ಯ ಸಮಯ ಮಿತಿಗಳು (ಎಫ್‌ಡಿಟಿಎಲ್) ನಿಯಮಗಳ ನಿಬಂಧನೆಯನ್ನು ಹಿಂತೆಗೆದುಕೊಂಡಿತು. ಜುಲೈ 1 ರಿಂದ ಜಾರಿಗೆ ಬಂದ ಈ ನಿಬಂಧನೆಯಲ್ಲಿ ವಾರದ ವಿಶ್ರಾಂತಿಯನ್ನು ರಜೆಯೊಂದಿಗೆ ಬದಲಿಸುವುದಿಲ್ಲ ಎಂದು ಆದೇಶಿಸಿದ್ದು, ವಿಮಾನಯಾನ ಸಂಸ್ಥೆಗಳು ಸಿಬ್ಬಂದಿ ಲಭ್ಯತೆಯನ್ನು ಬಿಗಿಗೊಳಿಸಿವೆ ಎಂದು ಹೇಳಲಾಗಿದೆ.
