ಉದಯವಾಹಿನಿ, ಮೆಲ್ಬೋರ್ನ್ : ಮೆಲ್ಬೋರ್ನ್ ನಗರದಲ್ಲಿ ಆಸ್ಟ್ರೇಲಿಯಾ ಕನ್ನಡ ಸಂಘದಿಂದ ನಿರ್ಮಾಣ ಹಂತದಲ್ಲಿರುವ ಮಹತ್ವಾಕಾಂಕ್ಷೆಯ ಕನ್ನಡ ಭವನಕ್ಕೆ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಇತ್ತೀಚಿಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ನಿಯೋಗವನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ, ಭವನದ ನಿರ್ಮಾಣ ಪ್ರಗತಿ ಹಾಗೂ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ವಿದೇಶಿ ನೆಲದಲ್ಲಿ ಕನ್ನಡದ ಕಂಪು ಪಸರಿಸಲು ಸಂಘವು ಕೈಗೊಂಡಿರುವ ಈ ಕಾರ್ಯವನ್ನು ಶ್ಲಾಘಿಸಿದ ಟಿ.ಎ.ಶರವಣ, ಕನ್ನಡ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ಕೊಡುವುದಾಗಿ ಘೋಷಿಸಿದರು.
ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಪರಂಪರೆಗೆ ಆಸ್ಟ್ರೇಲಿಯಾದ ನೆಲದಲ್ಲಿ ಒಂದು ಶಾಶ್ವತ ನೆಲೆ ಸಿಗುತ್ತಿರುವುದು ಪ್ರತಿಯೊಬ್ಬ ಕನ್ನಡಿಗರಿಗೂ ಹೆಮ್ಮೆಯ ವಿಷಯ ಎಂದರು. ಅಲ್ಲದೆ ಇದು ಕೇವಲ ಒಂದು ಕಟ್ಟಡವಲ್ಲ, ಸಮಸ್ತ ಕನ್ನಡಿಗರ ಭಾವನೆಗಳನ್ನು ಜೋಡಿಸುವ ಒಂದು ಸೇತುವೆ ಎಂದು ಭವನದ ಮಹತ್ವವನ್ನು ಒತ್ತಿ ಹೇಳಿದರು. ಆಸ್ಟ್ರೇಲಿಯಾದಲ್ಲಿ ಈ ಕನ್ನಡ ಭವನ ಸಂಪೂರ್ಣಗೊಂಡರೆ, ವಿದೇಶದ ನೆಲದಲ್ಲಿ ಅತಿದೊಡ್ಡ ಭಾರತೀಯ ಭಾಷಾ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಲಿದೆ. ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಕೆಗೆ, ಕನ್ನಡ ಪರ ಕಲೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ನಾಟಕಗಳಂತಹ ಪ್ರದರ್ಶನಗಳಿಗೆ ಇದು ವೇದಿಕೆಯಾಗಲಿದೆ ಎಂದು ತಿಳಿಸಿದರು.
