ಉದಯವಾಹಿನಿ ದಾವಣಗೆರೆ: ಇಲ್ಲಿನ ಹೊನ್ನೂರು ಕ್ರಾಸ್ ಬಳಿ ಡಿ.5 ರಂದು ಮಹಿಳೆಯನ್ನು ಕಚ್ಚಿ ಕೊಂದಿದ್ದ ರಾಟ್ ವೀಲರ್ ನಾಯಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದಾವಣಗೆರೆ ನಗರದ ಶಿವಾಲಿ ಚಿತ್ರಮಂದಿರದ ಮಾಲೀಕರ ಅಳಿಯ ಶೈಲೇಂದ್ರಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಆರೋಪಿ ರ‍್ಯಾಟ್ ವೀಲರ್ ನಾಯಿಗಳನ್ನು ಸಾಕಿದ್ದ ಎಂದು ತಿಳಿದು ಬಂದಿದೆ. ಡಿ.5 ರಂದು ಈತ ಹೊನ್ನೂರು ಕ್ರಾಸ್ ಬಳಿ ಆಟೋದಲ್ಲಿ ನಾಯಿಗಳನ್ನು ತಂದು ಬಿಟ್ಟು ಹೋಗಿದ್ದ.ಆರೋಪಿ ಬಿಟ್ಟು ಹೋದ ಎರಡು ರಾಟ್ ವೀಲರ್ ನಾಯಿಗಳು ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ (38) ಎಂಬವರ ಮೇಲೆ ದಾಳಿ ಮಾಡಿ ಕಚ್ಚಿ ಕೊಂದಿದ್ದವು. ಈ ಸಂಬಂಧ ಗ್ರಾಮಸ್ಥರು ನಾಯಿ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ನಾಯಿಯ ಮಾಲೀಕನನ್ನು ಬಂಧಿಸಿದ್ದಾರೆ.
ಮಹಿಳೆಯನ್ನು ಕಚ್ಚಿ ಕೊಂದಿದ್ದ ರಾಟ್ ವೀಲರ್ ನಾಯಿಗಳು ಸಹ ಇಂದು (ಡಿ.7) ಸಾವನ್ನಪ್ಪಿವೆ. ಗ್ರಾಮಸ್ಥರು ನಾಯಿಗಳನ್ನು ಸೆರೆಹಿಡಿಯಲು ನಿರಂತರವಾಗಿ ಓಡಿಸಿದ್ದರಿಂದ ನಾಯಿಗಳು ನಿತ್ರಾಣಗೊಂಡಿದ್ದವು. ಬಳಿಕ ಅವುಗಳನ್ನು ಸೆರೆ ಹಿಡಿದು ಎಬಿಸಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ನಿರಂತರವಾಗಿ ಓಡಿದ್ದರಿಂದ ಅಂತರಿಕ ರಕ್ತಸ್ರಾವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
