ಉದಯವಾಹಿನಿ, ನೀರಿನ ಅಂಶ ಅಧಿಕವಾಗಿರುವ ತರಕಾರಿಗಳಲ್ಲಿ ಮೂಲಂಗಿ ಕೂಡ ಒಂದಾಗಿದೆ. ಈ ಮೂಲಂಗಿಯಲ್ಲಿ ಅನೇಕ ರೋಗಗಳನ್ನು ಗುಣಪಡಿಸುವ ಪೋಷಕಾಂಶಗಳನ್ನು ಹೊಂದಿದೆ. ಹೌದು, ಚಳಿಗಾಲದಲ್ಲಿ ಮೂಲಂಗಿ ತಿನ್ನುವುದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ. ಮೂಲಂಗಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇವುಗಳಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಫೋಲೇಟ್ (ವಿಟಮಿನ್ ಬಿ9), ಮೆಗ್ನೀಸಿಯಮ್ ಹಾಗೂ ವಿಟಮಿನ್ ಬಿ6 ರೀತಿಯ ಪೋಷಕಾಂಶಗಳು ಇವೆ. ಉತ್ಕರ್ಷಣ ನಿರೋಧಕಗಳು, ಫೈಬರ್, ಗ್ಲುಕೋಸಿನೋಲೇಟ್‌ಗಳ ಉತ್ತಮ ಮೂಲವಾಗಿದೆ. ಮೂಲಂಗಿಯಲ್ಲಿ ಆರೋಗ್ಯಕ್ಕೆ ಪೂರಕವಾದ ಅನೇಕ ಅಂಶಗಳನ್ನು ಹೊಂದಿದೆ ಎಂದು ಆಯುರ್ವೇದ ವೈದ್ಯರು ವಿವರಿಸುತ್ತಾರೆ.
ಮೂಲಂಗಿಯನ್ನು ರಾತ್ರಿಯ ಸಮಯದಲ್ಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು. ಮೂಲಂಗಿ ಶೀತ ಪರಿಣಾಮವನ್ನು ಹೊಂದಿರುತ್ತದೆ. ಇದರಿಂದ ಶೀತ ಸ್ವಭಾವದ ಜನರು ರಾತ್ರಿಯಲ್ಲಿ ಮೂಲಂಗಿ ತಿನ್ನುವುದನ್ನು ಆದಷ್ಟು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಮೂಲಂಗಿಯ ಸೇವನೆಯಿಂದ ಲಭಿಸುವ ಪ್ರಯೋಜನಗಳೇನು?: ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ನಿಯಮಿತವಾಗಿ ಮೂಲಂಗಿಯನ್ನು ಸೇವನೆ ಮಾಡುವುದರಿಂದ ಅನಾರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಮೂಲಂಗಿ ತಿನ್ನುವುದರಿಂದ ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು, ಕರುಳುಗಳು ಹಾಗೂ ಇಡೀ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೇಹದ ಒಟ್ಟಾರೆ ಆರೋಗ್ಯ ಸುಧಾರಿಸಲು ಹೆಚ್ಚು ಸಹಾಯ ಮಾಡುತ್ತದೆ.
ದೇಹದ ತೂಕ ನಿಯಂತ್ರಣ: ಚಳಗಾಲದಲ್ಲಿ ಮೂಲಂಗಿಯನ್ನು ಸೇವನೆ ಮಾಡುವುದರಿಂದ ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೂಲಂಗಿಯಲ್ಲಿರುವ ಹೆಚ್ಚಿನ ಫೈಬರ್, ನೀರಿನ ಅಂಶವು ನಿಯಮಿತ ಕರುಳಿನ ಚಲನೆಯನ್ನು ವೃದ್ಧಿಸುತ್ತದೆ. ಮಲಬದ್ಧತೆ ತಡೆಯುತ್ತದೆ ಜೊತೆಗೆ ಹೊಟ್ಟೆ ಉಬ್ಬರ, ಅನಿಲ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಮೂಲಂಗಿ ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಿಸುವುದರ ಜೊತೆಗೆ ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಮೂಲಂಗಿ ದೇಹದ ಕೊಬ್ಬನ್ನು ಸುಡಲು ತುಂಬಾ ಸಹಾಯ ಮಾಡುತ್ತದೆ. ಇದರೊಂದಿಗೆ ಜೀರ್ಣಕ್ರಿಯೆ ಸುಧಾರಿಸಲು ಸಹಾಯಕವಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮ ಪರಿಣಾಮಗಳು ಲಭಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಮೂಲಂಗಿ ತಿನ್ನಲು ಸಾಧ್ಯವಾಗದಿದ್ದರೆ, ಜೋಳ ರೊಟ್ಟಿ ಇಲ್ಲವೇ ರಾಗಿ ರೊಟ್ಟಿಯೊಂದಿಗೆ ಮೂಲಂಗಿಯನ್ನು ಪಲ್ಯದ ಜೊತೆಗೆ ಸೇವಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
