ಉದಯವಾಹಿನಿ , ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಭಲಾರಾ ಅರಣ್ಯ ಪ್ರದೇಶದಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಉಗ್ರರ ಅಡಗು ತಾಣ ಪತ್ತೆಯಾಗಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಎಸ್‌ಎಸ್‌ಪಿ ದೋಡಾ ಸಂದೀಪ್ ಮೆಹ್ತಾ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಎಸ್‌ಒಜಿ ತಂಡವು ಅರಣ್ಯ ಪ್ರದೇಶದಲ್ಲಿ ಭಾನುವಾರ (ಡಿ.7) ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ವೇಳೆ ಉಗ್ರರ ಅಡಗು ತಾಣ ಪತ್ತೆಯಾಗಿದ್ದು, ಒಂದು ಎಸ್‌ಎಲ್‌ಆರ್ ರೈಫಲ್, ಎರಡು ಮ್ಯಾಗಜೀನ್‌ಗಳು ಮತ್ತು 22 ಸುತ್ತಿನ ಸಜೀವ ಗುಂಡುಗಳು ಪತ್ತೆಯಾಗಿವೆ. ಈ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ವಶಪಡಿಸಿಕೊಂಡಿರುವುದು ಈ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಿದೆ. ಈ ಮೂಲಕ ರಾಷ್ಟ್ರವಿರೋಧಿ ಶಕ್ತಿಗಳ ಸಂಭಾವ್ಯ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಈ ಕಾರ್ಯಾಚರಣೆಯು ದೋಡಾ ಜಿಲ್ಲೆಯಲ್ಲಿ ಶಾಂತಿ, ಸ್ಥಿರತೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಚಲ ಬದ್ಧತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
