ಉದಯವಾಹಿನಿ , ಹೈದರಾಬಾದ್: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬರೋಡಾ ತಂಡದ ಯುವ ಬ್ಯಾಟ್ಸ್‌ಮನ್ ಅಮಿತ್ ಪಾಸಿ ಅವರು ತಮ್ಮ ಟಿ20 ಪದಾರ್ಪಣೆ ಪಂದ್ಯದಲ್ಲಿಯೇ ಶತಕವನ್ನು ಬಾರಿಸಿದ್ದಾರೆ. ಸೋಮವಾರ ಇಲ್ಲಿನ ಜಿಮ್ಖಾನ ಗ್ರೌಂಡ್‌ನಲ್ಲಿ ನಡದಿದ್ದ ಸರ್ವಿಸಸ್ ಎದುರಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಅಮಿತ್ ಪಾಸಿ ಕೇವಲ 55 ಎಸೆತಗಳಲ್ಲಿ 114 ರನ್‌ಗಳನ್ನು ಬಾರಿಸಿದರು. ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಬಾರಿಸುವ ಮೂಲಕ ಅಮಿತ್ ಪಾಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ತಮ್ಮ ಸ್ಪೋಟಕ ಶತಕದ ಇನಿಂಗ್ಸ್‌ನಲ್ಲಿ ಅವರು 9 ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಗಳನ್ನು ಬಾರಿಸಿದರು. ಆ ಮೂಲಕ ಪುರುಷರ ಟಿ20 ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅವರು ಪಾಕಿಸ್ತಾನ ತಂಡದ ಬಿಲಾಲ್ ಆಸಿಫ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಿಲಾಲ್ ಆಸಿಫ್, 48 ಎಸೆತಗಳಲ್ಲಿ 114 ರನ್‌ಗಳನ್ನು ಕಲೆ ಹಾಕಿದ್ದರು. 2015ರ ಮೇ ತಿಂಗಳಲ್ಲಿ ಸಾಯಿಲ್‌ಕೋಟ್ ಸ್ಟಾಲಿನ್ಸ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದರು.
ಹೈದರಾಬಾದ್ ತಂಡದ ಅಕ್ಷತ್ ರೆಡ್ಡಿ ಹಾಗೂ ಪಂಜಾಬ್ ತಂಡದ ಶಿವಮ್ ಭಾಂಬ್ರಿ ಬಳಿಕ ಟಿ20 ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮೂರೂ ಶತಕಗಳು ಕೂಡ ಮೂಡಿ ಬಂದಿರುವುದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮೂಡಿ ಬಂದಿರುವುದು ವಿಶೇಷ. ಇದು ಭಾರತೀಯ ದೇಶಿ ಕ್ರಿಕೆಟ್‌ನಲ್ಲಿನ ಅತ್ಯಂತ ವಿಶೇಷ ಚುಟುಕು ಟೂರ್ನಿಯಾಗಿದೆ.
