ಉದಯವಾಹಿನಿ, ಬೆಳಗಾವಿ: ವಿಧಾನಸಭೆಯಲ್ಲೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕೂಗು ಪ್ರತಿಧ್ವನಿಸಿತು. ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪಿಸಿ ಪರಮೇಶ್ವರ್‌ಗೆ ಟಕ್ಕರ್ ಕೊಟ್ಟ ಪ್ರಸಂಗ ನಡೆಯಿತು.
ಬಿಜೆಪಿ ಶಾಸಕ ಸಿಮೆಂಟ್ ಮಂಜು ಆನ್‌ಲೈನ್ ಗೇಮ್ ಬೆಟ್ಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಪರಮೇಶ್ವರ್ ಉತ್ತರ ನೀಡಿದರು. ಆಗ ಮಧ್ಯಪ್ರವೇಶ ಮಾಡಿದ ಸುನೀಲ್ ಕುಮಾರ್, ನೀವು ಇಲ್ಲಿ ಬೆಟ್ಟಿಂಗ್ ಪ್ರಸ್ತಾಪ ಮಾಡ್ತಾ ಇದ್ದೀರಾ? ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ. ಶಾಸಕರಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಅಂತ ಬೆಟ್ಟಿಂಗ್ ನಡೆಯುತ್ತಿದೆ ಎಂದು ಸುನೀಲ್ ಕುಮಾರ್ ತಿವಿದ್ರು. ಈಗ ಅದೆಲ್ಲ ಚರ್ಚೆ ಬೇಡ ಕೂರಿ ಎಂದು ಸ್ಪೀಕರ್ ಸೂಚಿಸಿದರು. ಆಡಳಿತ ಪಕ್ಷದವರು ಮಾತ್ರ ನಕ್ಕು ಸುಮ್ಮನಾದರು.
ಇನ್ನು ವಿಧಾನಸಭೆ ಕಲಾಪ ಆರಂಭದಲ್ಲಿ ಮುಖ್ಯಮಂತ್ರಿ ಯಾರು ಎಂದು ಶಾಸಕ ಅರವಿಂದ್ ಬೆಲ್ಲದ್ ಪ್ರಸ್ತಾಪಿಸಿದ್ರು. ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಟ್ವೀಟ್ ಮಾಡಿದ್ದಾರೆ. ಯಾರು ಮುಖ್ಯಮಂತ್ರಿ ಎಂದು ಬೆಲ್ಲದ್ ಕೇಳಿದ್ರು. ಆಗ ಸ್ಪೀಕರ್ ಮಧ್ಯಪ್ರವೇಶ ಮಾಡಿ, ಉತ್ತರ ಕರ್ನಾಟಕ ಚರ್ಚೆ ಮಾಡಬೇಕಾದ್ರೆ ಇದು ಏಕೆ ಎಂದು ಗರಂ ಆದ್ರು. ಅಲ್ಲದೆ ಕಾಂಗ್ರೆಸ್ ಶಾಸಕರಿಂದಲೂ ಆಕ್ಷೇಪ ವ್ಯಕ್ತವಾಯ್ತು. ಅದು ನಮ್ಮ ಪಕ್ಷದ ವಿಚಾರ ನಿಮಗ್ಯಾಕೆ ಎಂದು ವಾಗ್ದಾಳಿ ನಡೆಸಿದರು.
