ಉದಯವಾಹಿನಿ, ಹೈದರಾಬಾದ್ : ನಗರದ ಜನರನ್ನು ಹೈರಾಣಾಗಿಸುವ ಸಮಸ್ಯೆಗಳಲ್ಲಿ ಟ್ರಾಫಿಕ್ ಕೂಡ ಒಂದಾಗಿದೆ. ಅದರಲ್ಲೂ ಬೆಂಗಳೂರು, ಮುಂಬೈ, ದೆಹಲಿಯಂತಹ ನಗರ ಪ್ರದೇಶದದಲ್ಲಿ ಈ ಸಮಸ್ಯೆ ದುಪ್ಪಟ್ಟಾಗಿದೆ. ಇಂತಹ ಬಿಡುವಿಲ್ಲದ ರಸ್ತೆ ಮಧ್ಯದಲ್ಲಿ ಒಂದು ಅಚ್ಚರಿಯ ದೃಶ್ಯ ಎಲ್ಲರ ಗಮನ ಸೆಳೆದಿದೆ. ಹೌದು, ಹೈದರಾಬಾದ್‌ನಲ್ಲಿ ಕಂಡು ಬಂದ ಈ ದೃಶ್ಯ ಗಮನ ಸೆಳೆದಿದೆ. ತೀವ್ರ ವಾಹನಗಳ ದಟ್ಟಣೆ ನಡುವೆಯೂ ಒಬ್ಬ ಬಾಲಕ ಹಸುವಿನ ಮೇಲೆ ಕೂತು ಬಹಳ ಸಲೀಸಾಗಿ ಸವಾರಿ ಮಾಡಿದ್ದಾನೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂತಹ ದೃಶ್ಯಗಳು ಸಾಮಾನ್ಯವಾಗಿ ಹಳ್ಳಿ ಪ್ರದೇಶದಲ್ಲಿ ಕಂಡುಬರುತ್ತವೆ. ಆದರೆ ನಗರದ ರಸ್ತೆಗಳಲ್ಲಿ ಇಂತಹ ದೃಶ್ಯ ನೋಡುವುದು ಜನರನ್ನು ಅಚ್ಚರಿಗೆ ದೂಡಿದೆ. ಸುತ್ತಲೂ ಚಲಿಸುತ್ತಿರುವ ಬಸ್, ಕಾರು ಮತ್ತು ಪಾದಚಾರಿಗಳ ನಡುವೆಯೂ ಈ ಬಾಲಕ ಹಸುವಿನ ಮೇಲೆ ವಿಶ್ವಾಸದಿಂದ ಕುಳಿತು ಮುಂದೆ ಸಾಗಿದ್ದಾನೆ. ವಿಡಿಯೊದಲ್ಲಿ ಕಾಣುವಂತೆ ಯುವಕ ಯಾವುದೇ ಭಯವಿಲ್ಲದೆ ಸವಾರಿಯನ್ನು ಖುಷಿ ಪಟ್ಟಿದ್ದಾನೆ. ಬಾಲಕನ ತಾಯಿ ಹಗ್ಗದಿಂದ ಹಸುವನ್ನು ಮುನ್ನಡೆಸುತ್ತಿರುವುದು ಕಂಡುಬಂದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದ್ದು”ಆಧುನಿಕ ನಗರ, ಸಾಂಪ್ರದಾಯಿಕ ಸವಾರಿ ಎಂದು ಕ್ಯಾಪ್ಶನ್ ನೀಡಲಾಗಿದೆ. ಇಂತಹ ವಾಹನಗಳ ಮಧ್ಯೆ ಯುವಕನೊಬ್ಬ ಗೂಳಿಯ ಮೇಲೆ ಆಕಸ್ಮಿಕವಾಗಿ ಸವಾರಿ ಮಾಡುತ್ತಾನೆ. ಇದು ಸಂಪ್ರದಾಯ ಮತ್ತು ನಗರ ಜೀವನದ ಅಪ ರೂಪದ ದೃಶ್ಯʼʼ ಎಂದು ಬರೆಯಲಾಗಿದೆ. ಸದ್ಯ ಈ ಅನಿರೀಕ್ಷಿತ ವಿಡಿಯೊ ಹೈದರಾಬಾದ್‌ನ ರಸ್ತೆಗಳಲ್ಲಿ ಒಂದು ಕ್ಷಣ ಎಲ್ಲರನ್ನು ಆಶ್ಚರ್ಯಗೊಳಿಸಿ ಜನರಲ್ಲಿ ನಗು ಮತ್ತು ಆಶ್ಚರ್ಯವನ್ನು ಮೂಡಿಸಿದೆ.
ಈ ವಿಡಿಯೊ ನೋಡಿ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಹೈದರಾಬಾದ್‌ನಲ್ಲಿ ಕಂಡುಬಂದ ಅಪರೂಪದ ದೃಶ್ಯ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ನಗರ ಪ್ರದೇಶದಲ್ಲೂ ಇಂತಹ ಅದ್ಭುತ ದೃಶ್ಯ ಕಂಡು ಬರುತ್ತವೆ ಎಂದು ಕಮೆಂಟ್ ಮಾಡಿದ್ದಾರೆ.
