ಉದಯವಾಹಿನಿ, ಪ್ರಕೃತಿಯಲ್ಲಿ ಬೆಳೆಯುವ ಒಂದೊಂದು ಹಣ್ಣೂ ಒಂದೊಂದು ಪೌಷ್ಠಿಕಾಂಶದಿಂದ ಸಮೃದ್ಧವಾಗಿದ್ದು, ಆರೋಗ್ಯ ವರ್ಧನೆಯಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತದೆ. ಅದೇ ರೀತಿಯಲ್ಲಿ ಬಾಯಿಗೆ ರುಚಿ ನೀಡುವ ಸೀಬೆ ಅಥವಾ ಪೇರಳೆ ಹಣ್ಣು ಸಹ ತನ್ನಲ್ಲಿರುವ ಪೌಷ್ಠಿಕಾಂಶದ ಗುಣಗಳಿಂದಾಗಿ ಎಲ್ಲರ ಅಚ್ಚುಮೆಚ್ಚಿನ ಹಣ್ಣಾಗಿದೆ.ಆಯುರ್ವೇದದಲ್ಲಿ ಈ ಹಣ್ಣನ್ನು ಅಮೃತ ಫಲ ಎಂದೇ ಕರೆಯುತ್ತಾರೆ. ಪೇರಳೆ ಹಣ್ಣು ವಿಟಮಿನ್, ನಾರಿನಾಂಶ ಮತ್ತು ಖನಿಜಾಂಶಗಳನ್ನು ಹೊಂದಿರುವ ಹಣ್ಣಾಗಿ ಹೆಸರುವಾಸಿಯಾಗಿದೆ. ಸೀಬೆ ಹಣ್ಣು ಹಲವಾರು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೊಜನಕಾರಿಯಾಗಿದೆ. ಅನೇಕ ಸಲ ರೋಗಿಗಳಿಗೆ ವೈದ್ಯರು ಸೀಬೆ ಹಣ್ಣನ್ನು ತಿನ್ನುವಂತೆ ಸಲಹೆ ನೀಡುತ್ತಾರೆ.
ತಜ್ಞರ ಪ್ರಕಾರ ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತಲೂ ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಈ ಹಣ್ಣಿನಲ್ಲಿ ಕಂಡುಬರುವ ಅಧಿಕ ಪ್ರಮಾಣದ ನಾರಿನಂಶ, ಪೊಟ್ಯಾಶಿಯಂ, ಮತ್ತು ಸಮೃದ್ಧವಾಗಿರುವ ಆಂಟಿ ಟಾಕ್ಸಿಕ್ ಅಂಶಗಳು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ.
ಸೀಬೆ ಹಣ್ಣಿನಲ್ಲಿರುವ ಕರಗುವ ಅಂಶದ ನಾರಿನಂಶವು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ. ಇದರಲ್ಲಿರುವ ನಾರು ಜೀರ್ಣಾಂಗದಲ್ಲಿ ಕೊಲೆಸ್ಟ್ರಾಲ್ ಹೀರುವಿಕೆಯನ್ನು ಕಡಿಮೆಮಾಡುತ್ತದೆ. ಮಾತ್ರವಲ್ಲದೇ ಈ ಹಣ್ಣಿನಲ್ಲಿ ಕಂಡುಬರುವ ಪೆಕ್ಟಿನ್ ಎಂಬ ಅಂಶ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸೀಬೆ ಹಣ್ಣಿನ ನಿಯಮಿತ ಸೇವನೆಯಿಂದ ರಕ್ತದೊತ್ತಡವನ್ನು ಸಹ ನಿಯಂತ್ರಿಸಲು ಸಾಧ್ಯವಿದೆ.
