ಉದಯವಾಹಿನಿ, ಭಾರತದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ವಿಶ್ವದಾದ್ಯಂತ ನಡೆಯುವ ಟಿ20 ಫ್ರಾಂಚೈಸಿ ಲೀಗ್‌ಗಳನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ವಸೀಮ್ ಅಕ್ರಮ್ ಟೀಕಿಸಿದ್ದಾರೆ. ಆದರೆ, ತಮ್ಮದೇ ದೇಶದಲ್ಲಿ ನಡೆಯುವ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಅವರು ಶ್ಲಾಘಿಸಿದ್ದಾರೆ. ಪಿಎಸ್‌ಎಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಸೀಮ್ ಅಕ್ರಮ್ ಐಪಿಎಲ್‌ನ ವಿಸ್ತೃತ ಅವಧಿಯ ಬಗ್ಗೆ ಹಗುರವಾದ ಹೇಳಿಕೆ ನೀಡಿದ್ದಾರೆ. ಈ ಟೂರ್ನಿಯು ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಹಾಸ್ಯ ಮಾಡಿದ್ದಾರೆ.
ಭಾರತದಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವಾಗಲೇ ಮಕ್ಕಳು ಬೆಳೆಯುತ್ತಾರೆ ಎಂದು ವ್ಯಂಗ್ಯವಾಡಿದರು. ಐಪಿಎಲ್‌ನ ಎರಡು ತಿಂಗಳಿಗಿಂತ ಹೆಚ್ಚಿನ ವೇಳಾಪಟ್ಟಿಯನ್ನು ಪಿಎಸ್‌ಎಲ್‌ನ ಸಾಂದ್ರೀಕೃತ, ಹೈ-ಟೆಂಪೋ ಸ್ವರೂಪದೊಂದಿಗೆ ಅವರು ಹೋಲಿಸಿದ್ದಾರೆ. ಪಾಕಿಸ್ತಾನ ಪ್ರೀಮಿಯರ್ ಲೀಗ್ ಟೂರ್ನಿಯು ಸಾಮಾನ್ಯವಾಗಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಇರುತ್ತದೆ.
ಲೀಗ್ ಪಾಲಿಗೆ ಒಂದು ಒಳ್ಳೆಯ ಸಂಗತಿ ಏನೆಂದರೆ, ಇದು 34 ರಿಂದ 35 ದಿನಗಳ ಕಾಲ ನಡೆಯಲಿದೆ ಹಾಗೂ ಬಹುಶಃ ಮುಂದಿನ ಒಂದು ಅವಧಿಯನ್ನು ಹೆಚ್ಚಿಸಬಹುದು. ಬೇರೆ ಲೀಗ್‌ಗಳ ರೀತಿ ಇದು ಮೂರು ತಿಂಗಳ ಕಾಲ ನಡೆಯುವುದಿಲ್ಲ. ಈ ಲೀಗ್ (ಐಪಿಎಲ್) ನಡೆಯುತ್ತಿರುವಾಗಲೇ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಯಾವುದೇ ಲೀಗ್ ಆಡಲು ಬರಬೇಕೆಂದರೆ ಅವರಿಗೆ ತಯಾರಿ ನಡೆಸಲು 35 ರಿಂದ 40 ದಿನಗಳು ಸಾಕು. ಆದರೆ, ಎರಡು ಹಾಗೂ ಎರಡೂವರೆ ಮೂರು ತಿಂಗಳ ಅವಧಿ ಎಂದರೆ, ಪ್ರತಿಯೊಬ್ಬರಿಗೂ ಇದು ಸ್ವಲ್ಪ ಜಾಸ್ತಿಯಾಗುತ್ತದೆ. ಈ ಟೂರ್ನಿಯನ್ನು ದೀರ್ಘಾವಧಿ ನೋಡಲು ನನಗೂ ಕೂಡ ಬೇಸರವಾಗುತ್ತದೆ,”ಎಂದು ವಸೀಮ್ ಅಕ್ರಮ್ ದೂರಿದ್ದಾರೆ.
