ಉದಯವಾಹಿನಿ , ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಇತ್ತೀಚೆಗೆ ರದ್ದುಗೊಳಿಸಿತ್ತು. ಈ ಬೆನ್ನಲ್ಲೇ ಇದಿಗ ಅಲೋಕ್ ಕುಮಾರ್​ಗೆ ಎಡಿಜಿಪಿಯಿಂದ ಡಿಜಿಪಿಯಾಗಿ ಬಡ್ತಿ ನೀಡಿದ ರಾಜ್ಯ ಸರ್ಕಾರ, ಕಾರಾಗೃಹ ಇಲಾಖೆಗೆ ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಆ ಮೂಲಕ 8 ತಿಂಗಳ ಹೋರಾಟಕ್ಕೆ ಜಯ ಸಿಕ್ಕಿದೆ.

ಅಲೋಕ್ ಕುಮಾರ್‌ಗೆ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ವರ್ಗಾವಣೆ ಹಿನ್ನಲೆ ಪೊಲೀಸ್ ತರಬೇತಿ ಇಲಾಖೆಯ ಎಡಿಜಿಪಿಯಾಗಿ ಬಿ.ದಯಾನಂದ್​​​ರನ್ನು ವರ್ಗಾವಣೆ ಮಾಡಿದೆ. 2019 ರಲ್ಲಿ ನಡೆದಿದ್ದ ಫೋನ್ ಟ್ಯಾಪಿಂಗ್ ಹಗರಣ ಪ್ರಕರಣದಲ್ಲಿ ಅಲೋಕ್ ಕುಮಾರ್ ಸೇರಿ ಕೆಲ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಇಲಾಖಾ ತನಿಖೆಗೆ ಆದೇಶ ಹೊರಡಿಸಿತ್ತು. ಈ ವೇಳೆ ಅಲೋಕ್ ಕುಮಾರ್ ನಗರ ಪೊಲೀಸ್ ಆಯುಕ್ತರಾಗಿದ್ದರು. ಸಿಬಿಐ ಪ್ರಕರಣದ ಬಗ್ಗೆ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ 2025 ಮೇ ತಿಂಗಳಿನಲ್ಲಿ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಇತ್ತೀಚೆಗೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದರು. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ವಾದಿಸಿದ್ದರು.
ಅಲೋಕ್ ಕುಮಾರ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡಿದ್ದರು. ಹೀಗಾಗಿ ವಿಚಾರಣೆ ಸಿಎಟಿ ಮುಖ್ಯಸ್ಥ ನ್ಯಾಯಮೂರ್ತಿ ರಣ್‌ಜೀತ್ ಬಳಿಗೆ ಹೋಗಿತ್ತು. ಈ ವೇಳೆ ವಾದ ಪ್ರತಿವಾದದ ಬಳಿಕ ಅಕ್ಟೋಬರ್ 14ರಂದು ತನಿಖೆಯನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಲಾಗಿತ್ತು. ಜೊತೆಗೆ ತಡೆಹಿಡಿಯಲಾಗಿದ್ದ ಬಡ್ತಿ ಮತ್ತು ಸೌಲಭ್ಯಗಳನ್ನು ನೀಡುವಂತೆ ಆದೇಶಿಸಲಾಗಿತ್ತು. ಆ ಮೂಲಕ ಅಲೋಕ್ ಕುಮಾರ್​​ ಅವರು ಗೆದ್ದಿದ್ದರು.

Leave a Reply

Your email address will not be published. Required fields are marked *

error: Content is protected !!