ಉದಯವಾಹಿನಿ, ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಪಾರ್ಕಿಂಗ್ ಮತ್ತು ಪಿಕಪ್‌ಗೆ ತಂದಿರುವ ಹೊಸ ರೂಲ್ಸ್ ವಿರೋಧಿಸಿ ಸಾವಿರಾರು ಚಾಲಕರು ರಸ್ತೆಗಿಳಿದು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚಿಗೆ ಸೈಡ್ ಪಿಕಪ್ ವಾಹನ ಚಾಲಕರಿಗೆ ಟರ್ಮಿನಲ್ 2ರಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲಾಗಿದೆ. ಜೊತೆಗೆ 8 ನಿಮಿಷದ ನಂತರ, ವಾಹನ ನಿಲ್ಲಿಸಿದ್ರೆ 150 ರೂ. ದಂಡ ವಿಧಿಸುವುದು, ಪ್ರೈವೆಟ್ ವೆಹಿಕಲ್‌ಗಳಿಗೆ ಏರ್ಪೋರ್ಟ್ ಹೊರಗೆ ಪಾರ್ಕಿಂಗ್ ಸ್ಥಳ ನಿಯೋಜನೆ ಮಾಡಿರುವ ಸಂಬಂಧ ಟ್ಯಾಕ್ಸಿ ಚಾಲಕರನ್ನ ಕೆರಳಿಸಿದೆ. ಈ ಎಲ್ಲಾ ಹೊಸ ನಿಯಮಗಳನ್ನ ವಿರೋಧಿಸಿ ರಸ್ತೆಗಿಳಿದ ನೂರಾರು ಚಾಲಕರು ಏರ್‌ಪೋರ್ಟ್ ಬಳಿಯ ಸಾದಹಳ್ಳಿ ಟೋಲ್ ಬಳಿ ಪ್ರತಿಭಟನೆ ನಡೆಸಿ ವಿಮಾನ ನಿಲ್ದಾಣ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ ಚಾಲಕರು ರಸ್ತೆ ತಡೆದು ವಾಹನಗಳ ಮೇಲೆ ವಾಟರ್ ಬಾಟಲ್ ಎಸೆಯೋ ಮೂಲಕ ಕಿಡಿ ಕಾರಿದರು. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು, ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ಹತೋಟಿಗೆ ತಂದರು. ಬಳಿಕ ಡಿಸಿಪಿ ಸಜಿತ್ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ 2 ದಿನ ಟೈಮ್ ಕೊಡಿ. ನಾವು ಏರ್ಪೋರ್ಟ್ ಆಡಳಿತ ಮಂಡಳಿ ಜೊತೆ ಚರ್ಚಿಸಿ ಪಾಸಿಟಿವ್ ನಿರ್ಧಾರಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಪೊಲೀಸರ ಮಾತಿಗೆ ಒಪ್ಪಿದ ಪ್ರತಿಭಟನಾಕಾರರು, ಪ್ರತಿಭಟನೆ ಕೈ ಬಿಟ್ಟು, ಶೀಘ್ರ ಸಮಸ್ಯೆ ಪರಿಹರಿಸಿ, ಇಲ್ಲದಿದ್ದರೆ ಮತ್ತೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.
