ಉದಯವಾಹಿನಿ, ರಾಮನಗರ: ಜಗತ್ತು ಡಿಜಿಟಲ್ ಆಗುತ್ತಿದ್ದಂತೆಯೇ ಎಲ್ಲವೂ ಆನ್‌ಲೈನ್ ಮಯವಾಗಿದೆ. ಊಟ, ಶಾಪಿಂಗ್ ಹೀಗೆ ಎಲ್ಲವೂ ಆನ್‌ಲೈನ್‌ನಲ್ಲೇ ಆರ್ಡರ್ ಮಾಡುವ ಕಾಲವಿದು. ಇದು ಇಷ್ಟಕ್ಕೆ ಸೀಮಿತವಾಗದೇ ನಿಶ್ಚಿತಾರ್ಥ, ಮದುವೆಯೂ ಆನ್ಲೈನ್‌ಗೆ ಕಾಲಿಟ್ಟಿದೆ. ಮಾಗಡಿ ಮೂಲದ ಯುವಕ ಹಾಗೂ ಉಡುಪಿ ಮೂಲದ ಯುವತಿ ಆನ್ಲೈನ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿರೋದು ಇದಕ್ಕೆ ಸಾಕ್ಷಿಯಾಗಿದೆ.
ಹೌದು, ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘನ ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಈ ನಿಶ್ಚಿತಾರ್ಥ ನಡೆದಿದ್ದು, ವರನ ಅನುಪಸ್ಥಿತಿಯಲ್ಲಿ ಎರಡೂ ಕುಟುಂಬಗಳು ಈ ಕಾರ್ಯಕ್ರಮ ನೆರವೇರಿಸಿವೆ.
ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಮಾಗಡಿ ಮೂಲದ ಸುಹಾಸ್‌ಗೆ ಇಂಡಿಯಾಗೆ ಬರಲು ರಜೆ ಸಿಕ್ಕಿಲ್ಲ. ಮುಂದಿನ ಜ. 7 ಹಾಗೂ 8 ಕ್ಕೆ ಮದುವೆ ನಿಗದಿಯಾಗಿದ್ದು, ನಿಶ್ಚಿತಾರ್ಥಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ ಕುಟುಂಬ ವೀಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿ ಮುಗಿಸಿದೆ.
